ಇಂದೋರ್: ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿ ನಡೆಸುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿಯ ಕಾರ್ಯದರ್ಶಿ ಕೈಲಾಶ್ ವಿಜಯ್ ವಾರ್ಗಿಯಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೈಲಾಶ್ ವಿಜಯ್ ವಾರ್ಗಿಯಾ ಅವರು ಇಂದೋರ್–1ರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಮಧ್ಯಪ್ರದೇಶ ಮತ್ತು ಇಂದೋರ್‌ನಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬರುವುದು ಅಗತ್ಯವಾಗಿದೆ. ಕಾಂಗ್ರೆಸ್‌ಗೆ ಮತ ನೀಡುವುದು ಅಥವಾ ಕಸದ ಬುಟ್ಟಿಗೆ ವೋಟು ಎಸೆಯವುದು ಎರಡೂ ಒಂದೇ. ಕಾಂಗ್ರೆಸ್‌ನ ಆಡಳಿತದಲ್ಲಿ ಅಭಿವೃದ್ಧಿ ಕಾರ್ಯಗಳ ಕಡೆ ಗಮನಹರಿಸುವುದಾಗಲೀ, ಸಂಸ್ಕೃತಿ ಹಾಗೂ ಮೌಲ್ಯಗಳಿಗೆ ಬೆಲೆ ನೀಡುವುದಾಗಲೀ ಆಗುವುದಿಲ್ಲ ಎಂದು ಕೈಲಾಶ್ ಟೀಕಿಸಿದ್ದಾರೆ.
ಕೈಲಾಸ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಕಾಂಗ್ರೆಸ್ ವಕ್ತಾರ ನೀಲಭ್ ಶುಕ್ಲಾ, ಕಾಂಗ್ರೆಸ್ ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಪಾಲಿಸಿಕೊಂಡು ಬರುತ್ತಿದೆ. ಕೈಲಾಶ್ ಅವರು ಶಿಷ್ಟಾಚಾರ ಮೀರಿ ಮಾತನಾಡುತ್ತಿದ್ದು, ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಮಧ್ಯಪ್ರದೇಶದ ಒಟ್ಟು 230 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 17 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.