ADVERTISEMENT

ಸೀಸ ಇರುವ ಮ್ಯಾಗಿಯನ್ನು ನಾವೇಕೆ ತಿನ್ನಬೇಕು: ಸುಪ್ರೀಂ ಕೋರ್ಟ್‌

ಮ್ಯಾಗಿ ಮಾರಾಟ: ಲೇಬಲಿಂಗ್‌, ಜಾಹೀರಾತಿನಲ್ಲಿ ತಪ್ಪು ಮಾಹಿತಿ ಆರೋಪ

ಪಿಟಿಐ
Published 5 ಜನವರಿ 2019, 4:33 IST
Last Updated 5 ಜನವರಿ 2019, 4:33 IST
   

ನವದೆಹಲಿ: ‘ಸೀಸ ಇರುವ ಮ್ಯಾಗಿಯನ್ನು ನಾವು ಏಕೆ ತಿನ್ನಬೇಕು’ ಎಂದು ಖಾದ್ಯ ಪದಾರ್ಥಗಳನ್ನು ಉತ್ಪಾದಿಸುವ ಬೃಹತ್‌ ಕಂಪನಿ ನೆಸ್ಲೆ ಇಂಡಿಯಾ ಪರ ವಕೀಲರನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

ಮ್ಯಾಗಿಯಲ್ಲಿ ಸೀಸದ ಅಂಶ ಇರುವುದು ನಿಜ ಎಂಬುದನ್ನು ಕಂಪನಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಒಪ್ಪಿಕೊಂಡಿದ್ದಾರೆ. ಆದರೆ, ಮಿತಿಯಲ್ಲಿಯೇ ಇದೆ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ. ಈ ವೇಳೆ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಹಾಗೂ ಹೇಮಂತ ಗುಪ್ತಾ ಅವರಿದ್ದ ಪೀಠಅವರನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯ ನಿವಾರಣಾ ಆಯೋಗ (ಎನ್‌ಸಿಡಿಆರ್‌ಸಿ) ನಡೆಸಲಿರುವ ವಿಚಾರಣೆಗೆ ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ನಿಡಿರುವ ವರದಿಯೇ ತಳಹದಿಯಾಗಲಿದೆ ಎಂದು ಹೇಳಿದೆ.

ನೆಸ್ಲೆ ಇಂಡಿಯಾ ವಿರುದ್ಧ ಎನ್‌ಸಿಡಿಆರ್‌ಸಿಯಲ್ಲಿ ಕೇಂದ್ರ ಸರ್ಕಾರ ಹೂಡಿದ್ದ ಪ್ರಕರಣಕ್ಕೆ ಸುಪ್ರೀಂಕೋರ್ಟ್‌ ಗುರುವಾರ ಮರುಜೀವ ನೀಡಿದೆ.

ADVERTISEMENT

ಮಾರಾಟದ ನೀತಿ–ನಿಯಮಗಳ ಪಾಲನೆ ನೀಡದಿರುವುದು, ಲೇಬಲಿಂಗ್‌ ಹಾಗೂ ಜಾಹೀರಾತುಗಳಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಆರೋಪಿಸಿ ಕೇಂದ್ರವು ₹ 640 ಕೋಟಿ ದಂಡ ವಿಧಿಸಿ ಕಂಪನಿ ವಿರುದ್ಧ ದಾಖಲಿಸಿದ್ದ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್‌ 2015ರ ಡಿಸೆಂಬರ್‌ 16ರಂದು ತಡೆ ನೀಡಿತ್ತು.

ಅಲ್ಲದೇ, ಕಂಪನಿಯ ಉತ್ಪನ್ನವಾದ ಮ್ಯಾಗಿಯನ್ನು ಪರೀಕ್ಷೆಗೊಳಪಡಿಸಿದ ನಂತರ ವರದಿ ಸಲ್ಲಿಸುವಂತೆ ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಗೆ ಸೂಚನೆಯನ್ನೂ ನೀಡಿತ್ತು.

ಮತ್ತೆ ವಿಚಾರಣೆ ಅಗತ್ಯವಿಲ್ಲ: ‘ಮ್ಯಾಗಿಯಲ್ಲಿ ಮೋನೊಸೋಡಿಯಂ ಗ್ಲುಟಾಮೇಟ್‌ (ಎಂಎಸ್‌ಜಿ) ಇಲ್ಲ ಎಂಬುದನ್ನೂ ಸಿಎಫ್‌ಟಿಆರ್‌ಐ ವರದಿ ದೃಢಪಡಿಸಿದೆ. ಹೀಗಾಗಿ ಪ್ರಕರಣವನ್ನು ಮತ್ತೆ ಎನ್‌ಸಿಡಿಆರ್‌ಸಿಗೆ ಕಳುಹಿಸುವುದರಲ್ಲಿ ಅರ್ಥ ಇಲ್ಲ’ ಎಂದು ಸಿಂಘ್ವಿ ಪ್ರತಿಪಾದಿಸಿದ್ದಾರೆ.

‘ಸಿಎಫ್‌ಟಿಆರ್‌ಐ ವರದಿ ಹಿನ್ನೆಲೆಯಲ್ಲಿ ಕಂಪನಿ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಮತ್ತೊಮ್ಮೆ ಎನ್‌ಸಿಡಿಆರ್‌ಸಿ ನಡೆಸಬೇಕು. ಹೀಗಾಗಿ ವಿಚಾರಣೆ ಮೇಲೆ ಹೇರಿದ್ದ ತಡೆಯನ್ನು ತೆರವುಗೊಳಿಸಬೇಕು’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್‌ ವಿಕ್ರಮ್‌ಜಿತ್‌ ಬ್ಯಾನರ್ಜಿ ವಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.