ADVERTISEMENT

ಸಿಎಂ ಅಲ್ಲ... ‘ಜಾದೂಗಾರ’ ಗೆಹ್ಲೋಟ್‌ ಬಗ್ಗೆ ಮಾತನಾಡಿದ್ದಾರೆ ಬಾಲ್ಯ ಸ್ನೇಹಿತ‌!

ಪಿಟಿಐ
Published 24 ಜುಲೈ 2020, 13:10 IST
Last Updated 24 ಜುಲೈ 2020, 13:10 IST
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌    

ಭೋಪಾಲ: ರಾಜಸ್ಥಾನ ಕಾಂಗ್ರೆಸ್‌ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಸಚಿನ್‌ ಪೈಲಟ್‌ 18 ಶಾಸಕರೊಂದಿಗೆ ಬಂಡೆದ್ದು, ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಆದರೆ, ಚಿಕ್ಕಂದಿನಿಂದಲೂ ಜಾದೂ ಕಲೆಯನ್ನು ರೂಢಿಸಿಕೊಂಡಿರುವ ಗೆಹ್ಲೋಟ್‌ ಈ ಸಂಕಷ್ಟವನ್ನು ಗೆದ್ದು ಬರುತ್ತಾರೆ ಎನ್ನುತ್ತಾರೆ ಅವರ ಬಾಲ್ಯದ ಸ್ನೇಹಿತ ಎಸ್‌.ಕೆ ನಿಗಮ್‌.

ಸದ್ಯ ಸಚಿನ್‌ ಪೈಲಟ್‌ ಸೃಷ್ಟಿಸಿರುವ ರಾಜಕೀಯ ಅಸ್ಥಿರತೆಯಲ್ಲಿ ಅಶೋಕ್‌ ಗೆಹ್ಲೋಟ್‌ ರಾಜ್ಯದ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ. ಮುಖ್ಯಮಂತ್ರಿಯಂಥ ದೊಡ್ಡ ಸ್ಥಾನದಲ್ಲಿರುವ ಅಶೋಕ್‌ ಗೆಹ್ಲೋಟ್‌ ಒಂದೊಮ್ಮೆ ತಮ್ಮ ತಂದೆ, ಖ್ಯಾತ ಜಾದೂಗಾರ ಲಕ್ಷ್ಮಣ್‌ ಸಿಂಗ್‌ (ಲಚಮನ ಸಿಂಗ್‌) ಅವರೊಂದಿಗೆ ವೇದಿಕೆಗಳಲ್ಲಿ ಜಾದೂಗಾರಿಕೆಗೆ ಸಹಾಯ ಮಾಡುತ್ತಿದ್ದರು. ಈ ವಿಚಾರ ಬಹುತೇಕರಿಗೆ ತಿಳಿದಿಲ್ಲ ಎನ್ನುತ್ತಾರೆ ನಿಗಮ್‌.

‘ಗೆಹ್ಲೋಟ್‌ಗೆ ನಾನು ಕೆಲವು ಜಾದು ತಂತ್ರಗಳನ್ನು ಕಲಿಸಿಕೊಟ್ಟಿದ್ದೇನೆ. ಅದಕ್ಕೆ ಪ್ರತಿಯಾಗಿ ಅವರು ನನಗೆ ಅತ್ಯದ್ಭುತ ಎನಿಸುವ ಜಾದೂ ತಂತ್ರಗಳನ್ನು ಹೇಳಿಕೊಟ್ಟಿದ್ದಾರೆ’ ಎಂದು ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯಲ್ಲಿ ವಾಸವಾಗಿರುವ ಅನುಭವಿ ಜಾದೂಗಾರ 73 ವರ್ಷದ ನಿಗಮ್ ಹೇಳಿದ್ದಾರೆ.

ADVERTISEMENT

‘ರಾಜಕೀಯ ಪ್ರವೇಶಿಸುವುದಕ್ಕೂ ಮೊದಲು ಗೆಹ್ಲೋಟ್‌ ತಮ್ಮ ತಂದೆ ಲಕ್ಷ್ಮಣ ಸಿಂಗ್‌ ಗೆಹ್ಲೋಟ್‌ ಅವರ ಜಾದೂ ಕಾರ್ಯಕ್ರಮಗಳಲ್ಲಿ ಪಕ್ಕದಲ್ಲೇ ಇರುತ್ತಿದ್ದರು. ಈಗ ಸೃಷ್ಟಿಯಾಗಿರುವ ರಾಜಕೀಯದ ವಾತಾವರಣವನ್ನು ಅವರು ಗೆದ್ದು ಬರುತ್ತಾರೆ ಎಂದು ನಾನು ಭಾವಿಸುತ್ತೇನೆ,’ ಎಂದು ಅವರು ಸುದ್ದಿ ಸಂಸ್ಥೆ ಪಿಟಿಐಗೆ ಹೇಳಿದ್ದಾರೆ.

ಗೆಹ್ಲೋಟ್‌ ತಂದೆ ಲಕ್ಷ್ಮಣ್‌ ಸಿಂಗ್‌ ಗೆಹ್ಲೋಟ್‌ ಅವರು ರಾಜಸ್ಥಾನದಲ್ಲಿ ಸ್ಥಳೀಯ ಸಂಸ್ಥೆಯೊಂದರ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು ಎಂದು ನಿಗಮ್‌ ಹೇಳಿದ್ದಾರೆ.

‘ರಾಜಕೀಯ ಪ್ರವೇಶಿಸಿದ ನಂತರವೂ ಅಶೋಕ್ ಜಾದೂಗಾರಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳಲಿಲ್ಲ. ಮ್ಯಾಜಿಕ್‌ನಲ್ಲಿನ ಅವರ ಪ್ರೀತಿ ಹಾಗೇ ಇದೆ. 1983 ರಲ್ಲಿ ಗೆಹ್ಲೋಟ್‌ ಕೇಂದ್ರ ಸಚಿವರಾಗಿದ್ದಾಗ ನಡೆದ ಅಖಿಲ ಭಾರತ ಮಹಿಳಾ ಮ್ಯಾಜಿಕ್ ಸ್ಪರ್ಧೆಗೆ ನಾನು ಅವರನ್ನು ಜಬಲ್ಪುರಕ್ಕೆ ಆಹ್ವಾನಿಸಿದ್ದೆ. ಅವರು ತುಂಬಾ ಸಂತೋಷಪಟ್ಟಿದ್ದರು’ ಎಂದು ನಿಗಮ್ ನೆನಪಿಸಿಕೊಂಡರು.

‘ಆಗಿನ್ನು ಮಕ್ಕಳಾಗಿದ್ದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಧಿ ಅವರಿಗೆ ಅವರ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಎದುರಲ್ಲಿ ಮ್ಯಾಜಿಕ್‌ ಮಾಡಿ ರಂಜಿಸುತ್ತಿದ್ದರೆಂದು ನನಗೆ ಕಾಂಗ್ರೆಸ್‌ ಒಳಗಿನ ಮೂಲಗಳು ಹೇಳಿದ್ದವು,‘ ಎಂದು ರಶೀದ್‌ ಕಿದ್ವಾಯಿ ಎಂಬ ಲೇಖಕರು ಹೇಳಿದ್ದಾರೆ. ರಶೀದ್‌ ‘ಸೋನಿಯಾ, ಎ ಬಯಾಗ್ರಾಫಿ’ ಕೃತಿ ಬರೆದಿದ್ದರು.

‘ಇಂದಿರಾ ಗಾಂಧಿಯವರ ಸಲಹೆ ಮೇರೆಗೆ ರಾಜಕೀಯ ಪ್ರವೇಶಿಸದೇ ಹೋಗಿದ್ದಲ್ಲಿ ನಾನು ಜಾದೂಗಾರಿಕೆ, ಸಮಾಜ ಸೇವೆ ಮಾಡಿಕೊಂಡು ಇರುತ್ತಿದ್ದೆ,’ ಎಂದು ಗೆಹ್ಲೋಟ್ ಹಿಂದೊಮ್ಮೆ ಹೇಳಿದ್ದಾಗಿ ರಶೀದ್‌ ನೆನಪಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.