ADVERTISEMENT

ಬಂಡಾಯಗಾರರ ವಿರುದ್ಧ ಶಿವಸೈನಿಕರ ಆಕ್ರೋಶ ತೀವ್ರ: ಮುಂಬೈ, ಠಾಣೆಯಲ್ಲಿ ನಿಷೇಧಾಜ್ಞೆ

ಮುಂಬೈ, ಠಾಣೆ ನಗರಗಳಲ್ಲಿ ನಿಷೇಧಾಜ್ಞೆ

ಪಿಟಿಐ
Published 25 ಜೂನ್ 2022, 18:56 IST
Last Updated 25 ಜೂನ್ 2022, 18:56 IST
ನಾಸಿಕ್ ಸಮೀಪ ಪ್ರತಿಭಟನೆ ನಡೆಸಿದ ಶಿವಸೇನಾ ಕಾರ್ಯಕರ್ತರು ಏಕನಾಥ ಶಿಂಧೆ ಅವರ ಪೋಸ್ಟರ್‌ಗೆ ಮಸಿ ಎರಚಿದರು–ಪಿಟಿಐ ಚಿತ್ರ
ನಾಸಿಕ್ ಸಮೀಪ ಪ್ರತಿಭಟನೆ ನಡೆಸಿದ ಶಿವಸೇನಾ ಕಾರ್ಯಕರ್ತರು ಏಕನಾಥ ಶಿಂಧೆ ಅವರ ಪೋಸ್ಟರ್‌ಗೆ ಮಸಿ ಎರಚಿದರು–ಪಿಟಿಐ ಚಿತ್ರ   

ಠಾಣೆ/ಮುಂಬೈ: ನಾಯಕತ್ವದ ವಿರುದ್ಧ ಬಂಡಾಯ ಎದ್ದಿರುವ ಶಿವಸೇನಾ ಶಾಸಕರ ವಿರುದ್ಧ ಪಕ್ಷದ ಕಾರ್ಯಕರ್ತರ ಆಕ್ರೋಶ ತೀವ್ರಗೊಂಡಿದೆ. ಪುಣೆ, ನಾಸಿಕ್, ಕೊಲ್ಲಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಬಂಡಾಯ ಶಾಸಕರು, ಸಂಸದರ ಮನೆ ಹಾಗೂ ಕಚೇರಿಗಳ ಮೇಲೆ ಶನಿವಾರ ದಾಳಿ ಮಾಡಿದ ಸೇನಾ ಕಾರ್ಯಕರ್ತರು ಪ್ರತಿ ಭಟನೆ ನಡೆಸಿದ್ದಾರೆ. ಇನ್ನೂ ಕೆಲವೆಡೆ ಶಿಂಧೆ ಅವರ ಪೋಸ್ಟರ್‌ಗೆ ಮಸಿ ಬಳಿಯ ಲಾಗಿದೆ. ಮುಂಬೈ ಹಾಗೂ ಠಾಣೆ ನಗರ
ದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಬಂಡಾಯ ನಾಯಕ ಏಕನಾಥ ಶಿಂಧೆ ಜೊತೆಗೆ ಗುರುತಿಸಿಕೊಂಡಿರುವ ಶಿವಸೇನಾ ಶಾಸಕ ತಾನಾಜಿ ಸಾವಂತ್ ಅವರ ಪುಣೆಯ ಕಚೇರಿಯ ಮೇಲೆ ಶಿವ ಸೈನಿಕರು ಶನಿವಾರ ದಾಳಿ ನಡೆಸಿ
ದ್ದಾರೆ. ದಿಲೀಪ್ ಲಾಂಡೆ ಅವರ ಮುಂಬೈ ನಲ್ಲಿರುವ ಕಚೇರಿ ಮೇಲೂ ದಾಳಿ ನಡೆಸಲಾಗಿದೆ. ಏಕನಾಥ ಶಿಂಧೆ ಅವರ ಪುತ್ರ ಹಾಗೂ ಕಲ್ಯಾಣ್ ಲೋಕಸಭಾ ಕ್ಷೇತ್ರದ ಸಂಸದ ಶ್ರೀಕಾಂತ್ ಶಿಂಧೆ ಅವರ ಕಚೇರಿ ಮೇಲೆ ಕಲ್ಲುತೂರಾಟ ನಡೆಸಲಾಗಿದೆ.

ಸಾವಂತ್ ಅವರಿಗೆ ಸೇರಿದ ಕತ್ರಾಜ್ ಪ್ರದೇಶದಲ್ಲಿರುವ ಭೈರವನಾಥ ಶುಗರ್‌ ವರ್ಕ್ಸ್ ಕಚೇರಿಗೆ ನುಗ್ಗಿ ಹಾನಿ ಮಾಡಲಾಗಿದೆ. ‘ಪಕ್ಷಕ್ಕೆ ದ್ರೋಹ ಬಗೆದ ಎಲ್ಲರಿಗೂ ಪಾಠ ಕಲಿಸುತ್ತೇವೆ. ಇದು ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ಪಕ್ಷದ್ರೋಹಿ ಶಾಸಕರ ಕಚೇರಿಗಳನ್ನು ಧ್ವಂಸ ಮಾಡುತ್ತೇವೆ’ ಎಂದು ಪಾಲಿಕೆ ಸದಸ್ಯ ವಿಶಾಲ್ ಧನವಾಡೆ ಎಚ್ಚರಿಕೆ ನೀಡಿದ್ದಾರೆ. ತಾನಾಜಿ ಸಾವಂತ್ ಹಾಗೂ ಮತ್ತೊಬ್ಬ ಬಂಡಾಯ ಶಾಸಕ ಜ್ಞಾನರಾಜ್ ಚೌಗಲೆ ವಿರುದ್ಧ ಉಸ್ಮಾನಾಬಾದ್‌ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.

ADVERTISEMENT

ಶ್ರೀಕಾಂತ್ ಶಿಂಧೆ ಅವರ ಕಚೇರಿಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ.

ಕಲ್ಲುತೂರಾಟ ನಡೆಸಿದ 8–10 ಜನರನ್ನು ಪೊಲೀಸರು ಬೆನ್ನಟ್ಟಿರುವ ವಿಡಿಯೊ ವೈರಲ್ ಆಗಿದೆ. ಐವರು ಶಿವಸೇನಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ದಾಳಿ ಘಟನೆಗಳಿಗೆ ಪ್ರತಿಕ್ರಿಯೆ ನೀಡಿರುವ ಸಾವಂತ್, ದಾಳಿಕೋರರಿಗೆ ತಿರುಗೇಟು ನೀಡುವುದಾಗಿ ಹೇಳಿದ್ದಾರೆ.

‘ಶಾಸಕರಾದ ತಾನಾಜಿ ಸಾವಂತ್ ಹಾಗೂ ಜ್ಞಾನರಾಜ್ ಚೌಗಲೆ ಇಬ್ಬರಿಗೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗಿದೆ. ಅವರ ಕ್ಷೇತ್ರಗಳಿಗೆ ಕೋಟಿಗಟ್ಟಲೆ ಅನುದಾನ ಹರಿದಿದೆ. ಅವರು ಏನಾದರೂ ಹೇಳಬೇಕಿದ್ದರೆ ಉದ್ಧವ್ ಅವರನ್ನು ಭೇಟಿಯಾಗಿ ಅವರ ಸಮ್ಮುಖದಲ್ಲಿ ಮಾತನಾಡಬೇಕು’ ಎಂದು ಉಸ್ಮಾನಾಬಾದ್ ನಗರ ಪರಿಷತ್ ಮುಖ್ಯಸ್ಥ ಸೋಮನಾಥ್ ಗುರವ್ ಹೇಳಿದ್ದಾರೆ.

ಮುಂಬೈನಲ್ಲಿ ಶಿವಸೇನಾ ಭವನಕ್ಕೆ ಬಂದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಸುತ್ತುವರಿದ ಕಾರ್ಯಕರ್ತರು ಶಿಂಧೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಂಡಾಯಗಾರರ ವಿರುದ್ಧ ಘೋಷಣೆ ಕೂಗಿದರು.

ಶಾಸಕರ ಭದ್ರತೆ ವಾಪಸ್?

ಬಂಡಾಯ ಹೂಡಿರುವ 38 ಶಿವಸೇನಾ ಶಾಸಕರ ಮನೆಗಳಿಗೆ ಮಹಾರಾಷ್ಟ್ರ ಸರ್ಕಾರ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆದಿದೆ ಎಂದು ಶಾಸಕ ಏಕನಾಥ ಶಿಂಧೆ ಅವರು ಶನಿವಾರ ಆರೋಪಿಸಿದ್ದಾರೆ. ಇದು ರಾಜಕೀಯ ದುರುದ್ದೇಶದ ಕ್ರಮ ಎಂದು ಖಂಡಿಸಿದ್ದಾರೆ.

ಮುಖ್ಯಮಂತ್ರಿ ಹಾಗೂ ಗೃಹಸಚಿವರಿಗೆ ಪತ್ರ ಬರೆದಿರುವ ಶಿಂಧೆ, ‘ಭದ್ರತೆ ವಾಪಸ್ ಪಡೆದಿರುವುದರಿಂದ ಶಾಸಕರ ಕುಟುಂಬ ಸದಸ್ಯರಿಗೆ ಏನೇ ಅನಾಹುತವಾದರೂ ಅದಕ್ಕೆ ಉದ್ಧವ್ ಠಾಕ್ರೆ ಹಾಗೂ ರಾಜ್ಯ ಸರ್ಕಾರವೇ ಹೊಣೆ’ ಎಂದು ಉಲ್ಲೇಖಿಸಿದ್ಧಾರೆ. 16 ಶಾಸಕರ ಸಹಿ ಇರುವ ಪತ್ರವನ್ನು ಅವರು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಆದರೆ ಬಂಡಾಯ ಶಾಸಕರಿಗೆ ನೀಡಲಾಗಿರುವ ಭದ್ರತೆ ವಾಪಸ್ ಪಡೆದಿಲ್ಲ ಎಂದು ಗೃಹಸಚಿವ ದಿಲೀಪ್ ವಲ್ಸೆ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ನಿಷೇಧಾಜ್ಞೆ

ಶಾಸಕರು, ಸಂಸದರ ಕಚೇರಿಗಳ ಮೇಲೆ ದಾಳಿ ನಡೆದದ್ದರಿಂದಾಗಿ ಮುಂಬೈನಲ್ಲಿ ಕಚೇರಿ ಹೊಂದಿರುವ ವಿವಿಧ ಪಕ್ಷಗಳ ರಾಜಕೀಯ ನಾಯಕರ ಕಚೇರಿಗಳಿಗೆ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಜುಲೈ 10ರವರೆಗೆ ಮುಂಬೈ ನಗರದ ಕೆಲವು ಕಡೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಠಾಣೆ ನಗರದಲ್ಲಿ ಯಾವುದೇ ಪ್ರತಿಭಟನೆ, ಮೆರವಣಿಗೆ ನಡೆಯುವುದನ್ನು ನಿಷೇಧಿಸಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಇಲ್ಲಿ ಜೂನ್ 30ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ.

ಕೆಲವು ದಿನಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದು, ಅವಾಚ್ಯ ಪದಗಳಿಂದ ನಿಂದಿಸಲಾಗುತ್ತಿದೆ ಎಂದು ಆರೋಪಿಸಿ ಶಿವಸೇನಾ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

***

ಶಿಂಧೆ ಅವರ ಸೂಚನೆಯಂತೆ ಸುಮ್ಮನಿದ್ದೇವೆ.ಬಿಕ್ಕಟ್ಟು ಅಂತ್ಯವಾದ ಬಳಿಕ ತಕ್ಕ ತಿರುಗೇಟು ಖಚಿತ. ದಾಳಿ ನಡೆಸಲು ಉದ್ದೇಶಿಸಿರುವವರು ತಮ್ಮ ಮಿತಿಯನ್ನು ಅರಿತಿದ್ದರೆ ಒಳ್ಳೆಯದು

- ತಾನಾಜಿ ಸಾವಂತ್, ಸೇನಾ ಬಂಡಾಯ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.