ADVERTISEMENT

Video | ಮೀಸಲಾತಿಗಾಗಿ ಕಟ್ಟಡದಿಂದ ಜಿಗಿದ ಮಹಾರಾಷ್ಟ್ರ ಉಪಸಭಾಪತಿಗೆ ಆಸರೆಯಾದ ಬಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2024, 11:14 IST
Last Updated 4 ಅಕ್ಟೋಬರ್ 2024, 11:14 IST
<div class="paragraphs"><p>ಮಹಾರಾಷ್ಟ್ರದ ಮುಂಬೈನಲ್ಲಿರುವ ರಾಜ್ಯ ಸರ್ಕಾರದ ಸಚಿವಾಲಯದಲ್ಲಿ ಶುಕ್ರವಾರ ಮಹಡಿಯಿಂದ ಕೆಳಗೆ ಹಾರಿದ ಜನಪ್ರತಿನಿಧಿಗಳನ್ನು ಸಿಬ್ಬಂದಿ ಮೇಲಕ್ಕೆ ಎತ್ತಿದರು</p></div>

ಮಹಾರಾಷ್ಟ್ರದ ಮುಂಬೈನಲ್ಲಿರುವ ರಾಜ್ಯ ಸರ್ಕಾರದ ಸಚಿವಾಲಯದಲ್ಲಿ ಶುಕ್ರವಾರ ಮಹಡಿಯಿಂದ ಕೆಳಗೆ ಹಾರಿದ ಜನಪ್ರತಿನಿಧಿಗಳನ್ನು ಸಿಬ್ಬಂದಿ ಮೇಲಕ್ಕೆ ಎತ್ತಿದರು

   

ಪಿಟಿಐ ಚಿತ್ರ

ಮುಂಬೈ: ಧಂಗರ್‌ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನಕ್ಕೆ ಆಗ್ರಹಿಸಿ ಮಹಾರಾಷ್ಟ್ರ ವಿಧಾನಸಭೆಯ ಉಪ ಸಭಾಪತಿ ನರಹರಿ ಝಿರ್ವಾಲ್ ಅವರು ಸಚಿವಾಲಯದ ಮೂರನೇ ಮಹಡಿಯಿಂದ ಹಾರಿದ ನಾಟಕೀಯ ಬೆಳವಣಿಗೆ ಶುಕ್ರವಾರ ನಡೆಯಿತು.

ADVERTISEMENT

ಅದೃಷ್ಟವಶಾತ್ ನೆಲಕ್ಕೆ ಬೀಳದಂತೆ ಹಾಕಲಾಗಿದ್ದ ಬಲೆ ನರಹರಿಯವರನ್ನು ರಕ್ಷಿಸಿದೆ. ಝಿರ್ವಾಲ್ ಅವರೊಂದಿಗೆ ಬಿಜೆಪಿಯ ಸಂಸದ ಸೇರಿ ಮೂವರು ಜನಪ್ರತಿನಿಧಿಗಳು ಹಾರಿದ್ದರು. ಸಚಿವಾಲಯದಲ್ಲಿ ಆತ್ಮಹತ್ಯೆ ಯತ್ನ ತಡೆಯುವ ಉದ್ದೇಶದೊಂದಿಗೆ 2018ರಲ್ಲಿ ಬಲೆ ಹಾಕಲಾಗಿತ್ತು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಸಿಪಿ ಅಜಿತ್ ಪವಾರ್ ಬಣದ ಸದಸ್ಯರಾಗಿರುವ ಝಿರ್ವಾಲ್ ಅವರು ಧಂಗರ್ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಕಲ್ಪಿಸುವಂತೆ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ನಂತರ ಮೂರನೇ ಮಹಡಿಯಿಂದ ಹಾರಲು ನಿರ್ಧರಿಸಿದರು. ಬಲೆ ಮೇಲೆ ಬಿದ್ದಿದ್ದರಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಎಲ್ಲಾ ನಾಟಕೀಯ ಬೆಳವಣಿಗೆಗಳ ಕುರಿತ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಈ ಘಟನೆಗೂ ಪೂರ್ವದಲ್ಲಿ, ಶುಕ್ರವಾರ ಸಂಪುಟ ಸಭೆ ನಡೆಯಿತು. ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಅಧ್ಯಕ್ಷತೆಯಲ್ಲಿ ಉಪಮುಖ್ಯಮಂತ್ರಿಗಳಾದ ಅಜಿತ್ ಪವಾರ್ ಹಾಗೂ ದೇವೆಂದ್ರ ಫಡಣವಿಸ್ ಅವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಚಿವಾಲಯದ ಹೊರಭಾಗದಲ್ಲಿ ಪ್ರತಿಭಟನೆ ನಡೆದಿದ್ದವು.

ಧಂಗರ್ ಸಮುದಾಯವು ಸದ್ಯ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ಹೊಂದಿದೆ. ಹಲವು ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡ ಸ್ಥಾನಮಾನ ಹೊಂದಿರುವ ಧಂಗಡ್‌ ಅವರಂತೆಯೇ ಧಂಗರ್‌ ಸಮುದಾಯಕ್ಕೂ ಪರಿಶಿಷ್ಟ ಪಂಗಡ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಸಮುದಾಯದವರು ಸೊಲ್ಲಾಪುರ ಜಿಲ್ಲೆಯ ಫಂಡರಪುರದಲ್ಲಿ ಧರಣಿ ನಡೆಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.