ADVERTISEMENT

ಮಹಾ ಸರ್ಕಾರದ ವಿಮಾನದಲ್ಲಿ ಪ್ರಯಾಣಿಸಲು ರಾಜ್ಯಪಾಲ ಕೋಶಿಯಾರಿಗೆ ಅನುಮತಿ ನಿರಾಕರಣೆ

ಪಿಟಿಐ
Published 11 ಫೆಬ್ರುವರಿ 2021, 9:33 IST
Last Updated 11 ಫೆಬ್ರುವರಿ 2021, 9:33 IST
ಭಗತ್ ಸಿಂಗ್ ಕೋಶಿಯಾರಿ
ಭಗತ್ ಸಿಂಗ್ ಕೋಶಿಯಾರಿ   

ಮುಂಬೈ: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ರಾಜ್ಯ ಸರ್ಕಾರದ ವಿಮಾನದಲ್ಲಿ ಗುರುವಾರ ಡೆಹ್ರಾಡೂನ್‌ಗೆ ಪ್ರಯಾಣಿಸಬೇಕಾಗಿತ್ತು. ಆದರೆ ಅವರಿಗೆ ಸರ್ಕಾರಿ ವಿಮಾನದಲ್ಲಿ ಪ್ರಯಾಣಿಸಲು ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಕೋಶಿಯಾರಿ ಅವರು ವಾಣಿಜ್ಯ ಬಳಕೆಯ ವಿಮಾನದ ಮೂಲಕ ಡೆಹ್ರಾಡೂನ್‌ಗೆ ತೆರಳಿದರು.

‘ಕೋಶಿಯಾರಿ ಅವರು ಗುರುವಾರ ಬೆಳಿಗ್ಗೆ 10 ಗಂಟೆಗೆ ಮುಂಬೈನಿಂದ ಡೆಹ್ರಾಡೂನ್‌ಗೆ ತೆರಳಬೇಕಾಗಿತ್ತು. ಬಳಿಕ ಅಲ್ಲಿಂದ ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಮಸ್ಸೂರಿಗೆ ಹೋಗಬೇಕಾಗಿತ್ತು’ ಎಂದು ಮೂಲಗಳು ಹೇಳಿವೆ.

ADVERTISEMENT

‘ರಾಜ್ಯ ಸರ್ಕಾರದ ವಿಮಾನವನ್ನು ಮುಂಚಿತವಾಗಿಯೇ ಬುಕ್ ಮಾಡಲಾಗಿತ್ತು. ಆದರೆ ಕೊನೆಯ ಕ್ಷಣದವರೆಗೆ ಇದಕ್ಕೆ ಅನುಮತಿ ಸಿಕ್ಕಿರಲಿಲ್ಲ. ಸಾಮಾನ್ಯವಾಗಿ ರಾಜ್ಯಪಾಲರು ಅನುಮತಿಗಾಗಿ ಕಾಯುವುದಿಲ್ಲ. ಆದರೆ ಇಂದು ರಾಜ್ಯಪಾಲರು ವಿಮಾನದಲ್ಲಿ ಕುಳಿತಾಗ, ಪೈಲಟ್, ನಿಮ್ಮ ಪ್ರಯಾಣಕ್ಕೆ ಅನುಮತಿ ಸಿಕ್ಕಿಲ್ಲ ಎಂಬುದಾಗಿ ಹೇಳಿದ್ದಾರೆ. ಬಳಿಕ ಮಧ್ಯಾಹ್ನ 12.15ಕ್ಕೆ ಕೋಶಿಯಾರಿ ಅವರು ವಾಣಿಜ್ಯ ಬಳಕೆಯ ವಿಮಾನದ ಮೂಲಕ ಡೆಹ್ರಾಡೂನ್‌ನತ್ತ ಪ್ರಯಾಣ ಬೆಳೆಸಿದರು’ ಎಂದು ಮೂಲಗಳು ಮಾಹಿತಿ ನೀಡಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌,‘ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಈ ಕುರಿತು ಮಾಹಿತಿ ಪಡೆದು ಕ್ರಮಕೈಗೊಳ್ಳುವುದಾಗಿ’ ಹೇಳಿದ್ದಾರೆ.

ಈ ಮಧ್ಯೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ‘ಉದ್ಧವ್‌ ಠಾಕ್ರೆ ನೇತೃತ್ವದ ಸರ್ಕಾರ ಈ ಕೂಡಲೇ ರಾಜ್ಯಪಾಲರ ಬಳಿ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದೆ.

‘ಒಂದು ವೇಳೆ ಮಹಾರಾಷ್ಟ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಅನುಮತಿ ನೀಡದಿದ್ದಲ್ಲಿ, ಇದು ರಾಜ್ಯ ಸರ್ಕಾರದ ಹೆಸರಿಗೆ ಕಪ್ಪು ಚುಕ್ಕೆಯಿದ್ದಂತೆ. ಗೊತ್ತಿಲ್ಲದೆ ಈ ತಪ್ಪು ನಡೆದಿದ್ದಲ್ಲಿ, ರಾಜ್ಯ ಸರ್ಕಾರವು ಕರ್ತವ್ಯ ನಿರ್ಲಕ್ಷ್ಯಿಸಿದ ಅಧಿಕಾರಿಯನ್ನು ಅಮಾನತುಗೊಳಿಸಬೇಕು’ ಎಂದು ಬಿಜೆಪಿ ನಾಯಕ ಸುಧೀರ್‌ ಮುಂಗಂತಿವಾರ್ ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.