ADVERTISEMENT

ಬಾಂಬೆ ಹೈಕೋರ್ಟ್‌ಗೆ ಸ್ಟ್ಯಾನ್‌ ವೈದ್ಯಕೀಯ ದಾಖಲೆ ಸಲ್ಲಿಸಿದ ‘ಮಹಾ’ ಸರ್ಕಾರ

ಪಿಟಿಐ
Published 13 ಜುಲೈ 2021, 14:02 IST
Last Updated 13 ಜುಲೈ 2021, 14:02 IST
ಸ್ಟ್ಯಾನ್‌ ಸ್ವಾಮಿ
ಸ್ಟ್ಯಾನ್‌ ಸ್ವಾಮಿ   

ಮುಂಬೈ: ಇಲ್ಲಿನ ಆಸ್ಪತ್ರೆಯಲ್ಲಿ ಇತ್ತೀಚೆಗೆ ಮೃತಪಟ್ಟ, ಬುಡಕಟ್ಟು ಜನರ ಹಕ್ಕುಗಳ ಪರ ಹೋರಾಟಗಾರ ಸ್ಟ್ಯಾನ್‌ ಸ್ವಾಮಿ ಅವರಿಗೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳನ್ನು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ಮಂಗಳವಾರ ಸಲ್ಲಿಸಿತು.

‘ವಿಚಾರಣಾಧೀನ ಕೈದಿಯಾಗಿದ್ದ ಸ್ಟ್ಯಾನ್‌ ಸ್ವಾಮಿ ಅವರನ್ನು ತಲೋಜಾ ಜೈಲಿನಲ್ಲಿರಿಸಿದಾಗಿನಿಂದ ಹಿಡಿದು ಇತ್ತೀಚಿನ ದಾಖಲೆಗಳನ್ನು ಒಳಗೊಂಡ ಕ್ರೋಡೀಕೃತ ವೈದ್ಯಕೀಯ ವರದಿಯನ್ನು ರಾಜ್ಯ ಸರ್ಕಾರ ಸಲ್ಲಿಸಿದೆ’ ಎಂದು ಮಹಾರಾಷ್ಟ್ರದ ಮುಖ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅರುಣಾ ಪೈ ಅವರು ನ್ಯಾಯಮೂರ್ತಿಗಳಾದ ಎಸ್‌.ಎಸ್‌.ಶಿಂಧೆ ಹಾಗೂ ಎನ್‌.ಜೆ.ಜಮಾದಾರ್‌ ಅವರಿರುವ ನ್ಯಾಯಪೀಠಕ್ಕೆ ತಿಳಿಸಿದರು.

‘ಸ್ಟ್ಯಾನ್‌ ಸ್ವಾಮಿ ಅವರ ಸಾವಿಗೆ ಮಹಾರಾಷ್ಟ್ರ ಜೈಲು ಅಧಿಕಾರಿಗಳು ಹಾಗೂ ಎನ್‌ಐಎ ನಿರ್ಲಕ್ಷ್ಯವೇ ಕಾರಣ. ಅವರಿಗೆ ಸಕಾಲದಲ್ಲಿ ಹಾಗೂ ಸೂಕ್ತ ಚಿಕಿತ್ಸೆ ಒದಗಿಸಲಿಲ್ಲ’ ಎಂದು ಸ್ಟ್ಯಾನ್‌ ಸ್ವಾಮಿ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಮಿಹಿರ್‌ ದೇಸಾಯಿ ಹೈಕೋರ್ಟ್‌ಗೆ ತಿಳಿಸಿದ್ದರು.

ADVERTISEMENT

ಸ್ಟ್ಯಾನ್‌ ಸ್ವಾಮಿ ಅವರ ವೈದ್ಯಕೀಯ ವರದಿಗಳನ್ನು ಪರಿಶೀಲಿಸುವಂತೆಯೂ ವಕೀಲ ದೇಸಾಯಿ ಮನವಿ ಮಾಡಿದ್ದರು.

ಎನ್‌ಐಎ ಹಾಗೂ ಮಹಾರಾಷ್ಟ್ರದ ಜೈಲು ಅಧಿಕಾರಿಗಳ ವಿರುದ್ಧದ ಆರೋಪಗಳ ಸತ್ಯಾಸತ್ಯತೆಯನ್ನು ತಿಳಿಯುವ ಸಂಬಂಧ ಸ್ಟ್ಯಾನ್‌ ಸ್ವಾಮಿ ಅವರ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್‌ ಆದೇಶಿಸಿತ್ತು.

ಎಲ್ಗಾರ್‌ ಪರಿಷತ್– ಸಿಪಿಎಂ (ಮಾವೋವಾದಿ) ನಡುವಿನ ಸಂಪರ್ಕಕ್ಕೆ ಸಂಬಂಧಿಸಿದ ಪ್ರಕರಣದ ಆರೋಪಿಯಾಗಿದ್ದ 84 ವರ್ಷದ ಸ್ಟ್ಯಾನ್‌ ಸ್ವಾಮಿ ಅವರನ್ನು ಎನ್ಐಎ ಬಂಧಿಸಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ಅವರು, ವೈದ್ಯಕೀಯ ಕಾರಣಗಳ ಹಿನ್ನೆಲೆಯಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಪಾರ್ಕಿನ್‌ಸನ್ಸ್‌ ಕಾಯಿಲೆಯಿಂದ ಬಳಲುತ್ತಿದ್ದ ಅವರ ಆರೋಗ್ಯ ಹದಗೆಟ್ಟಿದ್ದ ಕಾರಣ ಅವರನ್ನು ಇಲ್ಲಿನ ಪಿ.ಡಿ.ಹಿಂದುಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಂತರ ಅವರನ್ನು ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಕೋವಿಡ್‌–19 ಕೂಡ ದೃಢಪಟ್ಟಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಜುಲೈ 5ರಂದು ಆಸ್ಪತ್ರೆಯಲ್ಲಿ ಮೃತಪಟ್ಟರು.

ಹೋಲಿ ಫ್ಯಾಮಿಲಿ ಆಸ್ಪತ್ರೆ ಸಹ ಅವರಿಗೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.