ಮುಂಬೈ: ‘ಮಹಾರಾಷ್ಟ್ರದ ಮುಂಬೈ ಮತ್ತು ಅದರ ನೆರೆ ಪ್ರದೇಶಗಳಲ್ಲಿ ಬುಧವಾರ ರಾತ್ರಿಯಿಡೀ ಭಾರಿ ಮಳೆಯಾಗಿದ್ದು, ಹಲವು ಸ್ಥಳಗಳಲ್ಲಿ ಪ್ರವಾಹ ಉಂಟಾಗಿದೆ. ಕಸಾರ ಘಾಟ್ ಬಳಿಯ ರೈಲ್ವೆ ಹಳಿಗಳಲ್ಲಿ ನೀರು ತುಂಬಿದೆ. ಕೆಲವಡೆ ಕಲ್ಲು–ಮಣ್ಣು ಕುಸಿತ ಸಂಭವಿಸಿದೆ. ಇದರಿಂದಾಗಿ ಸ್ಥಳೀಯ ಮತ್ತು ದೂರದ ಪ್ರಯಾಣದ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ’ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.
‘ಹಲವು ಸ್ಥಳಗಳಲ್ಲಿ ದೂರದ ಪ್ರಯಾಣದ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ ರೈಲುಗಳಲ್ಲಿ ತೆರಳಬೇಕಾಗಿದ್ದ ಪ್ರಯಾಣಿಕರಿಗಾಗಿ ವಿಶೇಷ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಅವರು ಹೇಳಿದರು.
ಬುಧವಾರ ರಾತ್ರಿಯಿಂದ ಕೇಂದ್ರ ರೈಲ್ವೆ ವಿಭಾಗದ(ಸಿಆರ್) ಉಪನಗರ ರೈಲು ಸೇವೆಯು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್‍ನಿಂದ(ಸಿಎಸ್‌ಎಂಟಿ) ನೆರೆಯ ಠಾಣೆ ಜಿಲ್ಲೆಯ ಟಿಟ್ವಾಲಾ ಮತ್ತು ಅಂಬರನಾಥ್ ನಿಲ್ದಾಣಗಳವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತಿದೆ.
‘ನಾಸಿಕ್ ಜಿಲ್ಲೆಯಲ್ಲಿ ಟಿಟ್ವಾಲಾದಿಂದ ಇಗತಪುರಿ ಮತ್ತು ಪುಣೆಯ ಜಿಲ್ಲೆಯಲ್ಲಿನ ಅಂಬರನಾಥ್‌ನಿಂದ ಲೋನಾವಾಲ ಮಾರ್ಗದಲ್ಲಿ ರೈಲು ಹಳಿಗಳು ಕೊಚ್ಚಿಕೊಂಡು ಹೋಗಿರುವುದರಿಂದ ಮತ್ತು ಕೆಲವೆಡೆ ಭೂಕುಸಿತದ ಕಾರಣದ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಅವರು ತಿಳಿಸಿದರು.
ಕಸಾರದಲ್ಲಿ ಬುಧವಾರ ರಾತ್ರಿ 9ರಿಂದ ನಾಲ್ಕು ಗಂಟೆಗಳ ಕಾಲ 138 ಮಿ.ಮೀ ಮಳೆ ಸುರಿದಿದೆ. ಲೊನಾವಾಲ ಮತ್ತು ಕರ್ಜತ್‌ನಲ್ಲಿ ಬುಧವಾರ ಮಧ್ಯರಾತ್ರಿಯಿಂದ ಗುರುವಾರ ಬೆಳಿಗ್ಗೆ 7ರ ತನಕ ಕ್ರಮವಾಗಿ 142 ಮಿ.ಮೀ ಮತ್ತು 129.1 ಮಿ.ಮೀ ಮಳೆ ಸುರಿದಿದೆ.
‘ಭಾರಿ ಮಳೆಯಿಂದಾಗಿ ರೈಲ್ವೆ ಹಳಿಗಳು ಹಾನಿಗೊಳಗಾಗಿವೆ. ರೈಲು ಸೇವೆಯನ್ನು ಪುನರಾರಂಭಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿವೆ. ಕಾರ್ಮಿಕರು ರೈಲ್ವೆ ಹಳಿಯ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ’ ಎಂದು ಸುತಾರ್ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.