ADVERTISEMENT

ಜಿಲ್ಲಾಧಿಕಾರಿ ದೂರದೃಷ್ಟಿ; ಕೋವಿಡ್‌ 2ನೇ ಅಲೆಗೆ ಮುನ್ನ ಆಮ್ಲಜನಕ ಘಟಕ ಸ್ಥಾಪನೆ !

ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯ ಜಿಲ್ಲಾಧಿಕಾರಿ ರಾಜೇಂದ್ರ ಭರೂಡ್

ಪಿಟಿಐ
Published 29 ಏಪ್ರಿಲ್ 2021, 6:03 IST
Last Updated 29 ಏಪ್ರಿಲ್ 2021, 6:03 IST
ಡಾ. ರಾಜೇಂದ್ರ ಭರೂಡ್ಚಿತ್ರ: ರಾಜೇಂದ್ರ ಟ್ವಿಟರ್ ಖಾತೆ
ಡಾ. ರಾಜೇಂದ್ರ ಭರೂಡ್ಚಿತ್ರ: ರಾಜೇಂದ್ರ ಟ್ವಿಟರ್ ಖಾತೆ   

ಮುಂಬೈ: ಕಳೆದ ವರ್ಷ ‘ಕೋವಿಡ್‌ 19‘ ಅಲೆಯ ಅಬ್ಬರ ಕಡಿಮೆಯಾಗುತ್ತಿರುವಾಗ, ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಯನ್ನು ಅರಿತಿದ್ದ ಮಹಾರಾಷ್ಟ್ರದ ನಂದೂರ್‌ಬಾರ್‌ ಜಿಲ್ಲೆಯ ಜಿಲ್ಲಾಧಿಕಾರಿ ರಾಜೇಂದ್ರ ಭರೂಡ್ ಅವರು, ಈ ವರ್ಷ ಎರಡನೇ ಅಲೆ ಆರಂಭವಾಗುವ ಮುನ್ನವೇ ಜಿಲ್ಲೆಯಲ್ಲಿ ಹೆಚ್ಚುವರಿ ಆಮ್ಲಜನಕ ಘಟಕಗಳನ್ನು ತೆರೆದು, ಕೋವಿಡ್‌ ರೋಗಿಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ಐದು ಆಮ್ಲಜನಕ ಉತ್ಪಾದಕ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಒಂದು ದಿನಕ್ಕೆ 48ರಿಂದ 50 ಲಕ್ಷ ಲೀಟರ್‌ಗಳಷ್ಟು ಆಮ್ಲಜನಕವನ್ನು ಉತ್ಪಾದಿಸುತ್ತಿವೆ. ಜಿಲ್ಲಾಡಳಿತ ಹೆಚ್ಚುವರಿಯಾಗಿ ಇನ್ನೂ ಎರಡು ಘಟಕಗಳನ್ನು ಆರಂಭಿಸುವ ಕುರಿತು ಯೋಜನೆ ರೂಪಿಸುತ್ತಿದೆ.

ಮಹಾರಾಷ್ಟ್ರದ ಉತ್ತರ ಭಾಗದಲ್ಲಿರುವ ಧುಲೆ ಜಿಲ್ಲೆಯ ಸಕ್ರಿ ಮೂಲದ ರಾಜೇಂದ್ರ ಭರೂಡ್‌, 2013ನೇ ಬ್ಯಾಚ್‌ನ ಐಎಎಸ್ ಅಧಿಕಾರಿ. ಇವರು, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಇಳಿಯುತ್ತಿದ್ದಾಗಲೇ ನಂದೂರ್‌ಬಾರ್‌ ಜಿಲ್ಲಾ ಕೇಂದ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದಕ ಘಟಕ ಆರಂಭಿಸಲು ಕ್ರಮ ಕೈಗೊಂಡಿದ್ದರು. ಈ ಘಟಕದಲ್ಲಿ ನಿಮಿಷಕ್ಕೆ 600 ಲೀಟರ್ ಆಮ್ಲಜನಕ ಉತ್ಪಾದನೆಯಾಗುತ್ತದೆ.

ADVERTISEMENT

ಬುಡಕಟ್ಟು ಸಮುದಾಯದವರೇ ಹೆಚ್ಚಿರುವ ಜಿಲ್ಲೆಯಲ್ಲಿ, ಮೂಲ ಸೌಲಭ್ಯಗಳ ಕೊರತೆಯನ್ನು ಗಮನಿಸಿದ ರಾಜೇಂದ್ರ ಭರೂಡ್ ಅವರು, ರೋಗಿಗಳ ನಿರ್ವಹಣೆಗಾಗಿ ಬೇರೆಯವರನ್ನು ಅವಲಂಬಿಸುವುದನ್ನು ತಪ್ಪಿಸಲು ಈ ವರ್ಷ ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳಲ್ಲಿ ಜಿಲ್ಲೆಯ ಮತ್ತೆರಡು ನಗರಗಳ ಆಸ್ಪತ್ರೆಯಲ್ಲಿ ₹85 ಲಕ್ಷ ವೆಚ್ಚದಲ್ಲಿ ಆಮ್ಲಜನಕ ಘಟಕಗಳನ್ನು ಆರಂಭಿಸಲು ಕ್ರಮ ಕೈಗೊಂಡರು.

ಕಳೆದ ಸೆಪ್ಟೆಂಬರ್‌ವರೆಗೆ ಜಿಲ್ಲೆಯಲ್ಲಿ ಇಂಥ ಸೌಲಭ್ಯವಿರಲಿಲ್ಲ. ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಬೇರೆಯವರ ಮೇಲೆ ಅವಲಂಬಿಸುವುದನ್ನು ನಾವು ಬಯಸುವುದಿಲ್ಲ. ಈ ಅಂಶಗಳೇ ಜಿಲ್ಲೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಉತ್ತೇಜನ ನೀಡಿದವು‘ ಎಂದು ಭರೂಡ್ ಅವರು ದೂರವಾಣಿ ಮೂಲಕ ಸುದ್ದಿ ಸಂಸ್ಥೆಗೆ ತಿಳಿಸಿದರು.

ಈಗ ನಂದೂರ್‌ಬಾರ್‌ ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಯವರನ್ನು ಪ್ರೋತ್ಸಾಹಿಸುವ ಜತೆಗೆ, ಎರಡು ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗೆ ಉತ್ತೇಜನ ನೀಡಿದೆ. ಆಮ್ಲಜನಕದ ವಿಚಾರದಲ್ಲಿ ಜಿಲ್ಲೆಯಲ್ಲಿ ಸದ್ಯ ಯಾವುದೇ ಸಮಸ್ಯೆ ಇಲ್ಲ. ಪರಿಸ್ಥಿತಿ ಸಮತೋಲಿತವಾಗಿದೆ‘ ಎಂದು ಭರೂಡ್ ಅವರು ದೂರವಾಣಿ ಮೂಲಕ ಸುದ್ದಿ ಸಂಸ್ಥೆಗೆ ತಿಳಿಸಿದರು.

‘ನಂದೂರ್‌ಬಾರ್‌ಲ್ಲಿ ಒಟ್ಟು 1,250 ಆಮ್ಲಜನಕ ಸಹಿತ ಹಾಸಿಗೆಗಳಿವೆ. ಈ ಪೈಕಿ 250 ಖಾಲಿ ಇವೆ‘ ಎಂದು ಮಾಹಿತಿ ನೀಡಿದ ರಾಜೇಂದ್ರ, ‘ರೈಲ್ವೆ ಬೋಗಿಗಳನ್ನು ಪ್ರತ್ಯೇಕ ವಾರ್ಡ್‌ಗಳಾಗಿ ಬಳಸುತ್ತಿರುವ ಮಹಾರಾಷ್ಟ್ರದ ಏಕೈಕ ಜಿಲ್ಲೆ ನಂದೂರ್‌ಬಾರ್‌‘ ಎಂದು ಹೇಳಿದರು.

‘ರೋಗಿಗಳ ಸುಗಮ ಸಂಚಾರಕ್ಕಾಗಿ ಜಿಲ್ಲಾಡಳಿತ 30 ಆಂಬುಲೆನ್ಸ್‌ಗಳನ್ನು ಸೇವೆಗೆ ನಿಯೋಜಿಸಿದೆ. ಹಳ್ಳಿಗಳಲ್ಲಿರುವ ರೋಗಿಗಳನ್ನು ಕರೆದೊಯ್ಯಲು ಅನುಕೂಲವಾಗುವಂತೆ, ದೊಡ್ಡ ದೊಡ್ಡ ಗ್ರಾಮ ಪಂಚಾಯ್ತಿಗಳಿಗೆ ಆಂಬುಲೆನ್ಸ್ ಖರೀದಿಸಲು ಸೂಚಿಸಿದ್ದೇವೆ‘ ಎಂದು ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

ಜಿಲ್ಲೆಯು 16 ಸಂಚಾರಿ ಲಸಿಕಾ ತಂಡಗಳನ್ನು ಹೊಂದಿದೆ. ಈ ತಂಡ, ಮುಂಚಿತವಾಗಿ ನೋಂದಣಿ ಅಭಿಯಾನ ನಡೆಸುತ್ತದೆ. ಮಾರನೆಯ ದಿನ, ಆಯಾ ಪ್ರದೇಶಗಳಿಗೆ ತೆರಳಿ, ನೋಂದಣಿ ಮಾಡಿಸಿಕೊಂಡವರಿಗೆ ಲಸಿಕೆ ನೀಡುತ್ತದೆ.

‘ಆಸ್ಪತ್ರೆಗಳಲ್ಲಿರುವ ಹಾಸಿಗೆಗಳ ಲಭ್ಯತೆ, ಆಂಬುಲೆನ್ಸ್‌ಗಳ ಲಭ್ಯತೆಯಂತಹ ಮಾಹಿತಿ ನೀಡುವುದು, ಲಸಿಕಾ ಶಿಬಿರಗಳನ್ನು ನಡೆಸುವ ಮೂಲಕ ರೋಗಿಗಳಿಗೆ ನೆರವಾಗಲು ‘ಜನಸ್ನೇಹಿ ವ್ಯವಸ್ಥೆ‘ಯನ್ನು ರೂಪಿಸಿದ್ದೇವೆ‘ ಎಂದು ರಾಜೇಂದ್ರ ತಿಳಿಸಿದರು.

ಕಳೆದ ವರ್ಷ, ನಂದೂರ್‌ಬಾರ್‌ನಲ್ಲಿ ಪ್ರತಿದಿನ 190 ಕೋವಿಡ್‌ 19 ಪ್ರಕರಣಗಳು ದಾಖಲಾಗುತ್ತಿದ್ದವು. ಈ ವರ್ಷ, 200 ರಿಂದ 250 ಪ್ರಕರಣಗಳು ದಾಖಲಾಗುತ್ತಿವೆ. ಒಂದೇ ದಿನದಲ್ಲಿ 1,200 ಸೋಂಕಿನ ಪ್ರಕರಣಗಳು ದಾಖಲಾಗಿರುವ ಉದಾಹರಣೆಯೂ ಇದೆ‘ ಎಂದು ಭರೂಡ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.