ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಕಾರ್ಯದರ್ಶಿಯು ಶಿವಸೇನಾದ 53 ಶಾಸಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಇವರಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ 39 ಶಾಸಕರು, ಉದ್ಧವ್ ಠಾಕ್ರೆ ಬಣದ 14 ಶಾಸಕರು ಸೇರಿದ್ದಾರೆ.
ಉದ್ಧವ್ ಠಾಕ್ರೆ ಬಣದಲ್ಲಿದ್ದ ಶಾಸಕ ಸಂತೋಷ್ ಬಂಗಾರ್, ಕೊನೆಕ್ಷಣದಲ್ಲಿ ಶಿಂಧೆ ಬಣವನ್ನು ಸೇರಿಕೊಂಡಿದ್ದರು. ನೋಟಿಸ್ ಜಾರಿಯಾಗಿರುವುದನ್ನು ಉಭಯ ಬಣಗಳು ದೃಢಪಡಿಸಿವೆ. ಮಹಾರಾಷ್ಟ್ರ ವಿಧಾನಸಭೆ (ಪಕ್ಷಾಂತರಕ್ಕಾಗಿ ಅನರ್ಹತೆ) ನಿಯಮಗಳ ಅನುಸಾರ ನೋಟಿಸ್ ಜಾರಿಗೊಳಿಸಲಾಗಿದೆ.
ವಿಶ್ವಾಸಮತ ಕೋರುವ ಸಂದರ್ಭದಲ್ಲಿ ಪಕ್ಷದ ವಿಪ್ ಅನ್ನು ಉಲ್ಲಂಘಿಸಲಾಗಿದೆ ಎಂದು ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ನೇತೃತ್ವದ ಉಭಯ ಬಣಗಳು ಪರಸ್ಪರರ ವಿರುದ್ಧ ಆರೋಪ ಮಾಡಿದ್ದವು. ಅಲ್ಲದೆ, ಇದೇ ಲೋಪಕ್ಕಾಗಿ ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಮನವಿ ಮಾಡಿದ್ದವು.
ಏಳು ದಿನಗಳಲ್ಲಿ ಉತ್ತರಿಸಬೇಕು ಎಂದು ಶಾಸಕರಿಗೆ ಸೂಚಿಸಲಾಗಿದೆ. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಶಿವಸೇನಾದ ಸದಸ್ಯ ಬಲ 55 ಆಗಿದ್ದು, ಒಬ್ಬ ಶಾಸಕರ ನಿಧನದ ನಂತರ 54ಕ್ಕೆ ಇಳಿದಿದೆ. ಶಿಂಧೆ ಸರ್ಕಾರದ ವಿಶ್ವಾಸಮತದ ವೇಳೆ ಸರ್ಕಾರದ ಪರ 164, ವಿರುದ್ಧವಾಗಿ 99 ಶಾಸಕರು ಮತ ಚಲಾಯಿಸಿದ್ದರು.
ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನರ್ವೇಕರ್ ಅವರು, ಶಿವಸೇನಾದ ಮುಖ್ಯ ಸಚೇತಕರಾಗಿದ್ದ, ರಾಕ್ರೆ ಬಣದ ಸುನಿಲ್ ಪ್ರಭು ಅವರ ಬದಲಿಗೆ ಗೊಗವಾಲೆ ಅವರಿಗೆ ಸಚೇತಕರಾಗಿ ಮಾನ್ಯತೆ ನೀಡಿದ್ದರು. ಅನರ್ಹತೆ ಕೋರಿ ಶಿಂಧೆ ಬಣ ಸಲ್ಲಿಸಿದ್ದ ಮನವಿಯಲ್ಲಿ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಹೆಸರು ಉಲ್ಲೇಖಿಸಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.