ಪುಣೆ: ‘ಫೋನ್‌ನಲ್ಲೇ ಪತಿ ತ್ರಿವಳಿ ತಲಾಖ್ ನೀಡಿದ್ದಾರೆ’ ಎಂದು ಮಹಾರಾಷ್ಟ್ರದ ಅಹ್ಮದನಗರ ಜಿಲ್ಲೆಯ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
ಇದನ್ನು ಆಧರಿಸಿ ಅಹ್ಮದನಗರದ ಭಿಂಗರ್ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯ ವಿರುದ್ಧ ಮುಸ್ಲಿಂ ಮಹಿಳಾ ಕಾಯ್ದೆ (ಮದುವೆ ಹಕ್ಕುಗಳ ರಕ್ಷಣೆ) ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು.
‘ಪತಿ ಮುಂಬೈನಲ್ಲಿ ವಾಸವಿದ್ದು, ನವೆಂಬರ್ 20 ರಂದು ಪತ್ನಿಗೆ ಕರೆ ಮಾಡಿ, ‘ನಿನ್ನೊಂದಿಗೆ ನನಗೆ ಯಾವ ಸಂಬಂಧವೂ ಇಲ್ಲ. ನಿನ್ನ ಜೊತೆ ಸಹಜೀವನ ನಡೆಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.
‘ಅಲ್ಲದೆ ಫೋನ್ ಮೂಲಕವೇ ‘ತ್ರಿವಳಿ ತಲಾಖ್’ ನೀಡಿದ್ದಾರೆ ಎಂದು ಪತ್ನಿ ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.
ಮಹಿಳೆ ಮೊದಲು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಕೆಲಸಕ್ಕಾಗಿ ದುಬೈಗೆ ತೆರಳಿದ್ದರು. ಆದರೆ ಇತ್ತೀಚೆಗೆ ದುಬೈನಿಂದ ಅಹ್ಮದನಗರಕ್ಕೆ ಮರಳಿದ್ದರು. ದಂಪತಿಗೆ ಮೂರು ವರ್ಷದ ಮಗಳಿದ್ದಾಳೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.