ಪುಣೆ: ಆರ್ಯನ್ ಖಾನ್ ಆರೋಪಿಯಾಗಿರುವ ಡ್ರಗ್ಸ್ ಪತ್ತೆ ಪ್ರಕರಣದಲ್ಲಿ ಎನ್‌ಸಿಬಿ ಸಾಕ್ಷಿಗಳಲ್ಲಿ ಒಬ್ಬರಾದ ಕಿರಣ್ ಗೋಸಾವಿ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ ನಂತರ ಪುಣೆ ಪೊಲೀಸರು ವಂಚನೆಯ ಹೊಸ ಪ್ರಕರಣವೊಂದನ್ನು ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಹಾರಾಷ್ಟ್ರದ ಇಲ್ಲಿಯ ವನವಾಡಿ ಪೊಲೀಸ್ ಠಾಣೆಯಲ್ಲಿ ಶನಿವಾರ ರಾತ್ರಿ ಹೊಸ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
2018ರ ಪ್ರಕರಣವೊಂದರಲ್ಲಿ ಇಬ್ಬರು ವ್ಯಕ್ತಿಗಳಿಗೆ ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ವಂಚಿಸಿದ ಆರೋಪದಲ್ಲಿ ಮಹಾರಾಷ್ಟ್ರದ ಫರಾಸ್ಖಾನ್ ಪೊಲೀಸರು ಗುರುವಾರ ಗೋಸಾವಿಯನ್ನು ಬಂಧಿಸಿದರು. ನವೆಂಬರ್ 5 ರವರೆಗೆ ಅವರು ಪೊಲೀಸ್ ವಶದಲ್ಲಿರುತ್ತಾರೆ.
2020ರಲ್ಲಿ ಮಲೇಷ್ಯಾದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ₹ 4 ಲಕ್ಷ ವಂಚಿಸಿದ್ದಾರೆ ಎಂದು ಆರೋಪಿಸಿ ಮೂವರು ದೂರು ನೀಡಿದ ನಂತರ ಶುಕ್ರವಾರ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಇಲ್ಲಿನ ವನವಾಡಿಯ ಹಡಪ್ಸರ್ ಪ್ರದೇಶದ 45 ವರ್ಷದ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಶನಿವಾರ ರಾತ್ರಿ ಗೋಸಾವಿ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ), 409 ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ ಎಂದು ವನವಾಡಿ ಪೊಲೀಸ್ ಠಾಣೆಯ ಹಿರಿಯ ನಿರೀಕ್ಷಕ ದೀಪಕ್ ಲಗಾಡ್ ತಿಳಿಸಿದರು.
ಇತ್ತೀಚಿನ ದೂರಿನ ಪ್ರಕಾರ ಗೋಸಾವಿ ವ್ಯಕ್ತಿಯೊಬ್ಬರಿಗೆ ಮಲೇಷ್ಯಾದಲ್ಲಿ ಕೆಲಸ ಕೊಡಿಸುವುದಾಗಿ ₹ 1.45 ಲಕ್ಷ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.
ತಮಗೆ ಕೆಲಸ ಸಿಗದ ಬಗ್ಗೆ ಕೇಳಿದಾಗ ಗೋಸಾವಿ ಅವರು ಬಂದೂಕಿನಿಂದ ಬೆದರಿಸಿರುವುದಾಗಿ ದೂರುದಾರ ತಿಳಿಸಿರುವುದಾಗಿ ಅಧಿಕಾರಿಗಳು ಹೇಳಿದರು.
ಅಕ್ಟೋಬರ್ 2 ರಂದು ಎನ್‌ಸಿಬಿ ಮುಂಬೈನ ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಾಗ ಗೋಸಾವಿಯೂ ಅಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.