ನಾಗಪುರ: ಮಹಾರಾಷ್ಟ್ರದಲ್ಲಿ ಗುಟ್ಕಾ ಮತ್ತು ಸುವಾಸನೆಯುಕ್ತ ತಂಬಾಕು ಉತ್ಪನ್ನಗಳ ಮಾರಾಟಗಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಮುಕ್ತ ಅಧಿಕಾರವನ್ನು ಸರ್ಕಾರ ಈಗ ಪೊಲೀಸರಿಗೇ ನೀಡಿದೆ. ರಾಜ್ಯದಲ್ಲಿ 2012ರಿಂದಲೂ ಗುಟ್ಕಾ ಉತ್ಪನ್ನಗಳ ಮಾರಾಟ, ಸಾಗಣೆಯನ್ನು ನಿಷೇಧಿಸಲಾಗಿದೆ.
ಈವರೆಗೆ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದೂರು ದಾಖಲಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ ಕೋರಬೇಕಿತ್ತು. ಈಗ ಗುಟ್ಕಾ ಉತ್ಪನ್ನಗಳ ಮಾರಾಟಗಾರರು ಮತ್ತು ಸಾಗಣೆದಾರರ ವಿರುದ್ಧ ಜಾಮೀನುರಹಿತ ಮೊಕದ್ದಮೆ ದಾಖಲಿಸಲು ಹಾಗೂ ನಿಷೇಧ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಅಧಿಕಾರವನ್ನು ಪೊಲೀಸರಿಗೇ ನೀಡಲಾಗಿದೆ.
ವಿಶೇಷ ಐಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮಿಲಿಂದ್ ಭರಂಬೆ ಅವರು ಈ ಸಂಬಂಧ ಎಲ್ಲ ಪೊಲೀಸ್ ಠಾಣೆಗಳಿಗೆ ಸುತ್ತೋಲೆ ಹೊರಡಿಸಿದ್ದು, ಹೊಸ ಆದೇಶ ಜಾರಿಗೆ ಸೂಚನೆ ನೀಡಿದ್ದಾರೆ.
ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ನಿಯಮವನ್ನು ಉಲ್ಲಂಘಿಸಿದ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ 3 ವರ್ಷಗಳವರೆಗೆ ಶಿಕ್ಷೆ ವಿಧಿಸುವ ಅವಕಾಶವನ್ನು ಮಹಾರಾಷ್ಟ್ರ ಸರ್ಕಾರ2018ರಲ್ಲಿ ಕಲ್ಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.