ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಜೀನಾಮೆ ನೀಡಲು ಸಿದ್ಧವಿರುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಎನ್‌ಸಿಪಿ ಮುಖಂಡ ಶರದ್ ಪವಾರ್ ಅವರು ಠಾಕ್ರೆ ಅವರನ್ನು ಭೇಟಿಯಾಗಿದ್ದಾರೆ.
ಮಗಳು, ಸಂಸದೆ ಸುಪ್ರಿಯಾ ಸುಳೆ ಮತ್ತು ಸಚಿವ ಜಿತೇಂದ್ರ ಅವಾದ್ ಅವರ ಜೊತೆಗೂಡಿ ದಕ್ಷಿಣ ಮುಂಬೈನಲ್ಲಿರುವ ಠಾಕ್ರೆ ಅವರ ಅಧಿಕೃತ ನಿವಾಸ 'ವರ್ಷ'ಕ್ಕೆ ಬುಧವಾರ ಸಂಜೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ.
ಉಭಯ ಪಕ್ಷಗಳ ಮುಖಂಡರ ನಡುವೆ ನಡೆದ ಮಾತುಕತೆ ವಿವರ ಲಭ್ಯವಾಗಿಲ್ಲ.
ಏಕನಾಥ್ ಶಿಂಧೆ ಅವರ ನೇತೃತ್ವದಲ್ಲಿ ಬಂಡಾಯ ಶಾಸಕರು ಅಸ್ಸಾಂನ ಗುವಾಹಟಿಯನ್ನು ಸೇರಿಕೊಂಡಿದ್ದಾರೆ. ಬಂಡಾಯ ಶಾಸಕರ ಪೈಕಿ ಯಾರಾದರೊಬ್ಬರು ತನಗೆ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಬೇಡವೆಂದು ಹೇಳಿದರೆ ತಕ್ಷಣ ರಾಜೀನಾಮೆ ನೀಡುವುದಾಗಿ ಉದ್ಧವ್ ಠಾಕ್ರೆ ಅವರು ಫೇಸ್‌ಬುಕ್ ಲೈವ್‌ಗೆ ಬಂದು ತಿಳಿಸಿದ್ದರು. ತಾವು ರಾಜೀನಾಮೆ ನೀಡಿದ ಬಳಿಕ ಮತ್ತೊಬ್ಬ ಶಿವಸೇನಾ ಮುಖಂಡ ಮುಖ್ಯಮಂತ್ರಿ ಆದರೆ ಸ್ವಾಗತಿಸುವುದಾಗಿಯೂ ತಿಳಿದ್ದರು.
ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರು ಠಾಕ್ರೆ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.