ADVERTISEMENT

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಹುನ್ನಾರ: ಸಂಜಯ್‌ ರಾವುತ್‌

ಪಿಟಿಐ
Published 20 ಅಕ್ಟೋಬರ್ 2024, 13:12 IST
Last Updated 20 ಅಕ್ಟೋಬರ್ 2024, 13:12 IST
<div class="paragraphs"><p>ಸಂಜಯ್‌ ರಾವುತ್‌</p></div>

ಸಂಜಯ್‌ ರಾವುತ್‌

   

ಮುಂಬೈ: ‘ಮಹಾ ವಿಕಾಸ ಆಘಾಡಿ’ಯು (ಎಂವಿಎ) ಸರ್ಕಾರ ರಚಿಸದಂತೆ ತಡೆಯಲು ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಇದಕ್ಕೆ ಅನುಗುಣವಾಗಿಯೇ ಚುನಾವಣಾ ಆಯೋಗವು ಚುನಾವಣಾ ದಿನಾಂಕಗಳನ್ನು ಘೋಷಿಸಿದೆ’ ಎಂದು ಶಿವಸೇನಾ (ಉದ್ಧವ್‌ ಬಣ) ಸಂಸದ ಸಂಜಯ್‌ ರಾವುತ್‌ ಭಾನುವಾರ ಗಂಭೀರ ಆರೋಪ ಮಾಡಿದರು.

‘ರಾಜ್ಯದ 14ನೇ ವಿಧಾನಸಭೆ ಅವಧಿಯು ನ.26ಕ್ಕೆ ಮುಕ್ತಾಯಗೊಳ್ಳಲಿದೆ. ಮತದಾನವು ನ.20ರಂದು ನಡೆಯಲಿದೆ. ಫಲಿತಾಂಶವು 23ಕ್ಕೆ ಹೊರಬೀಳಲಿದೆ. ಹೊಸ ಸರ್ಕಾರ ರಚಿಸಲು ಎಂವಿಎ ಬಳಿ ಕೇವಲ 48 ಗಂಟೆಗಳು ಇರಲಿವೆ. ಒಂದು ವೇಳೆ ಈ ಅವಧಿಯೊಳಗೆ ಹೊಸ ಸರ್ಕಾರ ರಚಿಸದಿದ್ದರೆ, ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸು ಮಾಡುತ್ತಾರೆ’ ಎಂದು ರಾವುತ್‌ ಹೇಳಿದರು.

ADVERTISEMENT

‘ಮಹಾಯುತಿ’ ಸರ್ಕಾರವು ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಸತ್ಯ ಆ ಮೂರೂ ಪಕ್ಷಗಳಿಗೆ ತಿಳಿದಿದೆ. ಚುನಾವಣಾ ಆಯೋಗವು ಬಿಜೆಪಿಯ ವಕ್ತಾರರಂತೆ ವರ್ತಿಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸೋಲನ್ನು ಒಪ್ಪಿಕೊಂಡಂತೆ ತೋರುತ್ತಿದೆ. ಅದಕ್ಕಾಗಿಯೇ ರಾಷ್ಟ್ರಪತಿ ಆಳ್ವಿಕೆ ಹೇರುವ ತಂತ್ರ ಹೆಣೆದಿದ್ದಾರೆ’ ಎಂದರು.

‘ಚುನಾವಣಾ ಆಯೋಗವು ಇವಿಎಂಗಳನ್ನು ಬೆಂಬಲಿಸುತ್ತದೆ. ಹರಿಯಾಣ ಚುನಾವಣೆಯಲ್ಲಿ ಇವಿಎಂಗಳನ್ನು ತಿರುಚಲಾಗಿದೆ ಎಂದು ದೂರಿದರೆ, ಆಯೋಗವು ಮೌನವಹಿಸುತ್ತದೆ. ಲೋಕಸಭೆ ಚುನಾವಣೆಯಲ್ಲಿ ಹಣದ ದುರುಪಯೋಗ ಆಗಿದೆ ಎಂದು ದೂರು ನೀಡಿದರೂ ಆಯೋಗವು ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ’ ಎಂದು ಆಯೋಗದ ಕುರಿತು ತಕರಾರು ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.