ADVERTISEMENT

ಮಹಾರಾಷ್ಟ್ರ ಚುನಾವಣೆ | ಮತದಾರರಿಗೆ ಹಣ ಹಂಚಿದ ತಾವ್ಡೆ: ಬಹುಜನ ವಿಕಾಸ ಆಘಾಡಿ ಆರೋಪ

ಹಣ ಹಂಚುವಾಗಲೇ ಸಿಕ್ಕಿಬಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ: ಬಿವಿಎ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 16:17 IST
Last Updated 19 ನವೆಂಬರ್ 2024, 16:17 IST
ವಿನೋದ್‌ ತಾವ್ಡೆ
ವಿನೋದ್‌ ತಾವ್ಡೆ   

ಪಾಲ್ಘರ್‌ (ಮಹಾರಾಷ್ಟ್ರ): ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ಮತದಾರರಿಗೆ ₹5 ಕೋಟಿ ಹಂಚಿದ್ದಾರೆ ಎಂದು ಬಹುಜನ ವಿಕಾಸ ಆಘಾಡಿ (ಬಿವಿಎ) ಮಂಗಳವಾರ ಆರೋಪಿಸಿದೆ.

ವಿಧಾನಸಭಾ ಚುನಾವಣೆಯ ಮತದಾನಕ್ಕೆ ಒಂದು ದಿನ ಮುನ್ನ ಕೇಳಿಬಂದ ಈ ಆರೋಪವು ಮಹಾರಾಷ್ಟ್ರದ ರಾಜಕೀಯದಲ್ಲಿ ಭಾರಿ ಸದ್ದು ಉಂಟುಮಾಡಿದೆ. ತಮ್ಮ ವಿರುದ್ಧದ ಆರೋಪವನ್ನು ತಾವ್ಡೆ ಅಲ್ಲಗಳೆದಿದ್ದಾರೆ.

‘ತಾವ್ಡೆ ಅವರು ಹಣ ಹಂಚುತ್ತಿದ್ದುದನ್ನು ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನೋಡಿದ್ದಾರೆ. ಹಣ ಹಂಚುವಾಗಲೇ ಸಿಕ್ಕಿಬಿದ್ದಿದ್ದಾರೆ’ ಎಂದು ಬಿವಿಎ ಮುಖ್ಯಸ್ಥ ಹಿತೇಂದ್ರ ಠಾಕೂರ್ ಮತ್ತು ಅವರ ಪುತ್ರ ಕ್ಷಿತಿಜ್‌ ಠಾಕೂರ್‌ ಹೇಳಿದ್ದಾರೆ. 

ADVERTISEMENT

ಮುಂಬೈನಿಂದ 60 ಕಿ.ಮೀ. ದೂರದ ಪೂರ್ವ ವಿರಾರ್‌ನಲ್ಲಿರುವ ವಿವಾಂತ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ತಾವ್ಡೆ ಅವರು ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಲಾದ ಸ್ಥಳಕ್ಕೆ ನುಗ್ಗಿದ ಬಿವಿಎ ಕಾರ್ಯಕರ್ತರು, ಘಟನೆಯ ವಿಡಿಯೊ ಮಾಡಿದ್ದಾರೆ. ನೋಟುಗಳನ್ನು ತೋರಿಸುತ್ತಾ, ತಾವ್ಡೆ ಅವರನ್ನು ತರಾಟೆಗೆ ತೆಗೆದುಕೊಂಡ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

‘ಮತದಾರರ ಮೇಲೆ ಪ್ರಭಾವ ಬೀರುವುದಕ್ಕೆ ₹5 ಕೋಟಿ ಹಂಚಲು ಪಕ್ಷದ ಪ್ರಧಾನ ಕಾರ್ಯದರ್ಶಿ ತಾವ್ಡೆ ಅವರು ವಾಡಾದಿಂದ ಹಣದೊಂದಿಗೆ ವಿರಾರ್‌ಗೆ ಬಂದಿದ್ದಾರೆ ಎಂದು ಬಿಜೆಪಿಯ ನಾಯಕರೊಬ್ಬರು ನನಗೆ ಮಾಹಿತಿ ನೀಡಿದರು. ಅಪಾರ ಪ್ರಮಾಣದ ನಗದು, ಡೈರಿ ಮತ್ತು ಲ್ಯಾಪ್‌ಟಾಪ್‌ಅನ್ನು ನಾವು ಸ್ಥಳದಲ್ಲಿ ನೋಡಿದ್ದೇವೆ’ ಎಂದು ‘ಅಪ್ಪಾ’ ಎಂದೇ ಜನಪ್ರಿಯರಾಗಿರುವ ಠಾಕೂರ್ ಹೇಳಿದ್ದಾರೆ. ಆದರೆ ತಾವ್ಡೆ ಅವರ ಚಲನವಲನದ ಬಗ್ಗೆ ಸುಳಿವು ನೀಡಿದ ಬಿಜೆಪಿ ನಾಯಕನ ಹೆಸರನ್ನು ಅವರು ಬಹಿರಂಗಪಡಿಸಲಿಲ್ಲ.

‘ಅವರಂತಹ ರಾಷ್ಟ್ರೀಯ ನಾಯಕರು ಇಂತಹ ಕೆಲಸಕ್ಕೆ (ಹಣ ಹಂಚುವ) ಮುಂದಾಗಲಿಕ್ಕಿಲ್ಲ ಎಂದು ನಾನು ಭಾವಿಸಿದೆ. ಆದರೆ, ಅವರು ವಿರಾರ್‌ಗೆ ಬಂದದ್ದನ್ನು ನಾನು ನೋಡಿದೆ. ಹೋಟೆಲ್‌ನಲ್ಲಿ ಏನಾಯಿತು ಮತ್ತು ಅಲ್ಲಿ ಯಾರೆಲ್ಲಾ ಇದ್ದರು ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ’ ಎಂದರು. 

ಆರೋಪ ಅಲ್ಲಗಳೆದ ತಾವ್ಡೆ: ಬಿವಿಎ ಆರೋಪವನ್ನು ತಾವ್ಡೆ ಹಾಗೂ ಬಿಜೆಪಿ ಮಹಾರಾಷ್ಟ್ರ ಘಟಕದ ಅಧ್ಯಕ್ಷರು ಅಲ್ಲಗಳೆದಿದ್ದಾರೆ. ‘ನಾನು ನಾಲಾಸೋಪಾರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸುತ್ತಿದ್ದೆ. ಮತದಾನ ದಿನದ ನೀತಿಸಂಹಿತೆ ಬಗ್ಗೆ ಮಾಹಿತಿ ನೀಡಲು ಸಭೆ ಕರೆದಿದ್ದೆ’ ಎಂದು ತಾವ್ಡೆ ಪ್ರತಿಕ್ರಿಯಿಸಿದ್ದು, ‘ತನಿಖೆ ಎದುರಿಸಲು ಸಿದ್ಧನಿದ್ದೇನೆ’ ಎಂದಿದ್ದಾರೆ.

‘ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಸಬೇಕು. ನಾನು 40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಅಪ್ಪಾ (ಹಿತೇಂದ್ರ ಠಾಕೂರ್‌) ಮತ್ತು ಕ್ಷಿತಿಜ್ ಅವರನ್ನು ಚೆನ್ನಾಗಿ ಬಲ್ಲೆ’ ಎಂದು ಹೇಳಿದ್ದಾರೆ.

ಬಿಜೆಪಿ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಚಂದ್ರಶೇಖರ ಬಾವಂಕುಲೆ, ‘ತಾವ್ಡೆ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ಈ ರೀತಿ ಹಣ ಹಂಚುವರೇ? ಅವರು ರಾಜಕೀಯ ವಿರೋಧಿಗಳ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ’ ಎಂದಿದ್ದಾರೆ.

ಮುಚ್ಚಿಹಾಕಲು ಸಾಧ್ಯವಿಲ್ಲ: ‘ಬಿಜೆಪಿ ಎಷ್ಟೇ ಪ್ರಯತ್ನಿಸಿದರೂ ಇದನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ಏಕೆಂದರೆ ವಿರಾರ್‌ನಲ್ಲಿ ಏನು ನಡೆದಿದೆಯೋ, ಅವೆಲ್ಲವೂ ಕ್ಯಾಮೆರಾ ಮುಂದೆ ನಡೆದಿದೆ. ಬಿಜೆಪಿಯ ಕೆಲವು ನಾಯಕರೇ ಅವರ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ’ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್‌ ರಾವುತ್‌ ಹೇಳಿದ್ದಾರೆ.

ಬಂಧನಕ್ಕೆ ಆಗ್ರಹ: ತಾವ್ಡೆ ಅವರನ್ನು ಬಂಧಿಸಬೇಕೆಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ, ಮಹಾರಾಷ್ಟ್ರ ಉಸ್ತುವಾರಿ ರಮೇಶ್‌ ಚೆನ್ನಿತ್ತಲ ಆಗ್ರಹಿಸಿದ್ದಾರೆ.

ವಿನೋದ್‌ ತಾವ್ಡೆ
ಮೋದೀಜಿ ಅವರೇ ಈ ₹5 ಕೋಟಿ ಎಲ್ಲಿಂದ ಬಂತು? ಸಾರ್ವಜನಿಕರ ಹಣ ಲೂಟಿ ಮಾಡಿ ನಿಮಗೆ ಟೆಂಪೊದಲ್ಲಿ ಕಳುಹಿಸಿದ್ದು ಯಾರು?
ರಾಹುಲ್‌ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ
ಬಿಜೆಪಿಯವರು ‘ವೋಟ್‌– ಜಿಹಾದ್‌’ ಆರೋಪ ಮಾಡುತ್ತಿದ್ದಾರೆ. ಆದರೆ ವಾಸ್ತವವಾಗಿ ನಡೆಯುತ್ತಿರುವುದು ‘ನೋಟ್– ಜಿಹಾದ್’
ಉದ್ಧವ್‌ ಠಾಕ್ರೆ ಶಿವಸೇನಾ (ಯುಬಿಟಿ) ಮುಖ್ಯಸ್ಥ

₹9.93 ಲಕ್ಷ ನಗದು ವಶ

ಬಿಜೆಪಿ ಕಾರ್ಯಕರ್ತರು ಹಣ ಹಂಚುತ್ತಿದ್ದರು ಎನ್ನಲಾದ ಹೋಟೆಲ್‌ನಿಂದ ಹಿರಿಯ ಅಧಿಕಾರಿಗಳನ್ನೊಳಗೊಂಡ ಪೊಲೀಸ್ ತಂಡವು ₹9.93 ಲಕ್ಷ ನಗದು ವಶಪಡಿಸಿಕೊಂಡಿದೆ. ಹಣ ಹಂಚಿಕೆ ಆರೋಪ ಸಾಬೀತುಪಡಿಸುವಂತಹ ಕೆಲವು ದಾಖಲೆಗಳೂ ಸಿಕ್ಕಿವೆ ಎಂದು ಮೂಲಗಳು ಹೇಳಿವೆ. ‘ಹಣ ಹಂಚುತ್ತಿದ್ದಾರೆ ಎಂಬ ದೂರು ಬಂದ ತಕ್ಷಣವೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ₹9.93 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದ್ದು ಪ್ರಕರಣ ದಾಖಲಿಸಲಾಗಿದೆ’ ಎಂದು ಪಾಲ್ಘರ್‌ ಜಿಲ್ಲಾಧಿಕಾರಿ ಗೋವಿಂದ ಬೋಡ್ಕೆ ತಿಳಿಸಿದ್ದಾರೆ. ‘ತಾವ್ಡೆ ಅವರು ಈ ಕ್ಷೇತ್ರದ ಮತದಾರ ಅಲ್ಲ. ಆದ್ದರಿಂದ ಮತದಾನಕ್ಕೆ 48 ಗಂಟೆಗಳು ಇರುವಾಗ ವಿರಾರ್‌ಗೆ ಪ್ರವೇಶಿಸಿದ್ದಕ್ಕೆ ಅವರ ವಿರುದ್ಧವೂ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.