ನವದೆಹಲಿ: ಮಹಾದೇವ್ ಆ್ಯಪ್ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಮತ್ತೆ ಇಬ್ಬರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.
ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 11ಕ್ಕೆ ಏರಿದಂತಾಗಿದೆ.
ಗಿರೀಶ್ ತಲ್ರೇಜಾ ಹಾಗೂ ಸೂರಜ್ ಚೋಖಾನಿ ಬಂಧಿತರು. ಇಬ್ಬರನ್ನೂ ಕ್ರಮವಾಗಿ ಮಾರ್ಚ್ 2 ಹಾಗೂ 3ರಂದು ಇ.ಡಿ ತನ್ನ ವಶಕ್ಕೆ ತೆಗೆದುಕೊಂಡಿತ್ತು.
ಇಬ್ಬರೂ ಆರೋಪಿಗಳನ್ನು ಮಾರ್ಚ್ 11ರ ವರೆಗೆ ತನ್ನ ಕಸ್ಟಡಿಗೆ ನೀಡಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ವಿಶೇಷ ನ್ಯಾಯಾಲಯ ಆದೇಶಿಸಿದೆ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಾದೇವ್ ಆನ್‌ಲೈನ್ ಬುಕ್ (ಎಂಒಬಿ) ಆ್ಯಪ್‌ನ ಅಂಗಸಂಸ್ಥೆಯಾದ ‘ಲೋಟಸ್365’ನಲ್ಲಿ ಆರೋಪಿ ಗಿರೀಶ್ ತಲ್ರೇಜಾ ಪಾಲುದಾರಿಕೆ ಹೊಂದಿದ್ದಾರೆ. ‘ಲೋಟಸ್365’ ಮೂಲಕ ಅಕ್ರಮ ವ್ಯವಹಾರ ನಡೆಸಲಾಗುತ್ತಿತ್ತು. ರತನ್ ಲಾಲ್ ಜೈನ್ ಅಲಿಯಾಸ್ ಅಮನ್ ಹಾಗೂ ಸೌರಭ್ ಚಂದ್ರಕರ್ ಎಂಬುವವರು ಮಹಾದೇವ್ ಆ್ಯಪ್‌ನ ಪ್ರಮುಖ ಪ್ರವರ್ತಕರು ಎಂದು ಇ.ಡಿ ಹೇಳಿದೆ.
ಪುಣೆಯಲ್ಲಿರುವ ‘ಲೋಟಸ್365’ ಶಾಖೆಗಳ ಮೇಲೆ ಮಾರ್ಚ್ 1ರಂದು ಶೋಧ ನಡೆಸಲಾಗಿತ್ತು. ಈ ವೇಳೆ, ₹1 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದೂ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.