ADVERTISEMENT

‘ಮಹಾಘಟಬಂಧನ’ ಬಿಟ್ಟ ಮಾಯಾ

ಎಸ್‌ಪಿ ಮೈತ್ರಿ ಮುಕ್ತಾಯ; ಏಕಾಂಗಿಯಾಗಿ ಸ್ಪರ್ಧಿಸಲು ಬಿಎಸ್‌ಪಿ ನಿರ್ಧಾರ

ಏಜೆನ್ಸೀಸ್
Published 24 ಜೂನ್ 2019, 20:00 IST
Last Updated 24 ಜೂನ್ 2019, 20:00 IST
ಅಖಿಲೇಶ್–ಮಾಯಾವತಿ
ಅಖಿಲೇಶ್–ಮಾಯಾವತಿ   

ಲಖನೌ: ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡುವಲ್ಲಿ ವೈಫಲ್ಯ ಕಂಡಿದ್ದ ಸಮಾಜವಾದಿ ಪಕ್ಷ (ಎಸ್‌ಪಿ)–ಬಹುಜನಸಮಾಜ ಪಕ್ಷಗಳ (ಬಿಎಸ್‌ಪಿ) ನಡುವಿನ ಐದು ತಿಂಗಳ ‘ಮಹಾಘಟಬಂಧನ’ ಅಂತ್ಯವಾಗಿದೆ. ಮುಂದಿನ ಚುನಾವಣೆಗಳನ್ನು ಪ್ರತ್ಯೇಕವಾಗಿ ಎದುರಿಸುವುದಾಗಿ ಬಿಎಸ್‌ಪಿ ವರಿಷ್ಠೆ ಮಾಯಾವತಿ ಸೋಮವಾರ ಘೋಷಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟದ ಕಳಪೆ ಪ್ರದರ್ಶನಕ್ಕೆಎಸ್‌ಪಿ ಕಾರಣ ಎಂದು ಆರೋಪಿಸಿದ್ದ ಮರುದಿನವೇ ಮಾಯಾವತಿ ಸರಣಿ ಟ್ವೀಟ್ಮಾಡಿದ್ದಾರೆ. ‘ಎಸ್‌ಪಿ ಜೊತೆಗಿಟ್ಟುಕೊಂಡು ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವುದು ಸಾಧ್ಯವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಕೆಲವು ಕ್ಷೇತ್ರಗಳಲ್ಲಿ ಎಸ್‌ಪಿ ಮುಖಂಡರು ಬಿಎಸ್‌ಪಿ ವಿರುದ್ಧ ಕೆಲಸ ಮಾಡಿದರು.ಚುನಾವಣೆ ಬಳಿಕ ಅಖಿಲೇಶ್ ನನಗೆ ಕರೆ ಮಾಡುವ ಸೌಜನ್ಯವನ್ನೂ ತೋರಲಿಲ್ಲ. ನಮ್ಮ ಪಕ್ಷದಿಂದ ಹೆಚ್ಚು ಮುಸ್ಲಿಮರನ್ನು ಕಣಕ್ಕಿಳಿಸಲು ಅಖಿಲೇಶ್ ಸಹಮತ ವ್ಯಕ್ತಪಡಿಸಿರಲಿಲ್ಲ’ ಎಂದುಭಾನುವಾರ ನಡೆದ ಪಕ್ಷದ ಕಾರ್ಯಕಾರಣಿಯಲ್ಲಿ ಅವರು ಆರೋಪಿಸಿದ್ದರು.

ADVERTISEMENT

ತೆರವಾಗಿರುವ 12 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಏಕಾಂಗಿಯಾಗಿ ಸ್ಪರ್ಧಿಸಲು ಅವರು ನಿರ್ಧರಿಸಿದ್ದಾರೆ. 2014ರ ಚುನಾವಣೆಯಲ್ಲಿ ಸೊನ್ನೆಸುತ್ತಿದ್ದ ಬಿಎಸ್‌ಪಿ, 2019ರ ಚುನಾವಣೆಯಲ್ಲಿ ಎಸ್‌ಪಿ ಜತೆ ಮೈತ್ರಿ ಮಾಡಿಕೊಂಡು 10 ಸ್ಥಾನಗಳನ್ನು ಗೆದ್ದು
ಕೊಂಡಿತ್ತು. ಆದರೆ ಡಿಂಪಲ್ ಯಾದವ್ ಸೇರಿದಂತೆ ಮುಲಾಯಂ ಕುಟುಂಬದಐವರು ಸದಸ್ಯರೇ ಸೋಲುಂಡರು. ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಜನವರಿಯಲ್ಲಿ ಬಿಎಸ್‌ಪಿ–ಎಸ್‌ಪಿ ಹಾಗೂಆರ್‌ಎಲ್‌ಡಿ ಪಕ್ಷಗಳು ಸಖ್ಯ ಮಾಡಿಕೊಂಡಿದ್ದವು. ಆದರೆ ಫಲಿತಾಂಶ ಮಾತ್ರ ಭಿನ್ನವಾಗಿತ್ತು.

ಮಾಯಾವತಿಗೆ ಭೀತಿ: ಎಸ್‌ಪಿ

ಅಖಿಲೇಶ್ ಯಾದವ್ ಅವರಿಗೆ ದಲಿತ ಸಮುದಾಯದ ದೊಡ್ಡ ಬೆಂಬಲ ಸಿಕ್ಕಿರುವುದಕ್ಕೆ ಮಾಯಾವತಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮಶಂಕರ್ ವಿದ್ಯಾರ್ಥಿ ಆರೋಪಿಸಿದ್ದಾರೆ.

‘ಮಾಯಾವತಿ ಅವರು ಸಾಮಾಜಿಕ ನ್ಯಾಯದ ಹೋರಾಟವನ್ನು ದುರ್ಬಲಗೊಳಿಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ರಾಜಕೀಯದಲ್ಲಿ ಬದ್ಧತೆ ಬಹಳ ಮುಖ್ಯ ಎಂದು ಕಾಂಗ್ರೆಸ್ ವಕ್ತಾರ ದ್ವಿಜೇಂದ್ರ ತ್ರಿಪಾಠಿ ಹೇಳಿದ್ದಾರೆ. ‘ರಾಜಕೀಯ ಪಕ್ಷಗಳು ತಮ್ಮ ನಡುವಿನ ಮಾತನ್ನು ಉಳಿಸಿಕೊಳ್ಳಲು ವಿಫಲವಾದರೆ, ಜನರಿಗೆ ನೀಡುವ ಭರವಸೆಗಳನ್ನು ಉಳಿಸಿಕೊಳ್ಳುವಲ್ಲಿಯೂ ಸೋಲುತ್ತವೆ ಎಂದು ಜನರು ಭಾವಿಸುತ್ತಾರೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.