ADVERTISEMENT

ಮಹಾಘಟಬಂಧನ್ ಧನಿಕರ, ಭ್ರಷ್ಟರ ಕೂಟ: ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 16:36 IST
Last Updated 20 ಜನವರಿ 2019, 16:36 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಶನಿವಾರ ಕೊಲ್ಕತ್ತಾದಲ್ಲಿ ನಡೆದ ಮಮತಾ ಬ್ಯಾನರ್ಜಿ ನೇತೃತ್ವದ ಮಹಾ ರ‍್ಯಾಲಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ಐದು ನಗರಗಳ ಬೂತ್ ಕಾರ್ಯಕರ್ತರೊಂದಿಗೆ ವಿಡಿಯೊ ಸಂವಾದ ನಡೆಸಿದ ಮೋದಿ, ಕೋಲ್ಕತ್ತದಲ್ಲಿ ನಿನ್ನೆ ಕಂಡು ಬಂದ ಒಕ್ಕೂಟ ವಿಶಿಷ್ಟವಾದುದಾಗಿದೆ. ಅವರು ಪರಸ್ಪರ ಮೈತ್ರಿ ಮಾಡಿಕೊಂಡಿದ್ದಾರೆ.ಆದರೆ ನಾವು 125 ಕೋಟಿ ಜನರೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ.ಹೀಗಿರುವಾಗ ಯಾವ ಮೈತ್ರಿ ಶಕ್ತಿಯುತವಾದುದು?

ಕೊಲ್ಕತ್ತಾದ ವೇದಿಕೆಯಲ್ಲಿ ಕಂಡು ಬಂದ ನಾಯಕರಲ್ಲಿ ಹಲವರು ಪ್ರಭಾವಿ ವ್ಯಕ್ತಿಗಳ ಮಕ್ಕಳು ಅಥವಾ ತಮ್ಮ ಮಕ್ಕಳನ್ನು ರಾಜಕೀಯದಲ್ಲಿ ಮುಂದೆ ತರಲು ಯತ್ನಿಸುತ್ತಿರುವ ವ್ಯಕ್ತಿಗಳಾಗಿದ್ದಾರೆ.ಅವರಲ್ಲಿ ಧನ ಶಕ್ತಿ ಇದೆ, ನಮ್ಮಲ್ಲಿರುವುದು ಜನಶಕ್ತಿ ಎಂದಿದ್ದಾರೆ.

ADVERTISEMENT

ಈ ಒಕ್ಕೂಟ ವಿಶಿಷ್ಟವಾದುದು.ಇದು ಧನಿಕರ, ಮಾವ ಮತ್ತು ಅಳಿಯಂದಿರ, ಭ್ರಷ್ಟರ, ಹಗರಣಗಳ, ಋಣಾತ್ಮಕ, ಅಭದ್ರ ಮತ್ತು ಅಸಮಾನತೆಯ ಒಕ್ಕೂಟವಾಗಿದೆ.

ಪ್ರಜಾಪ್ರಭುತ್ವದ ರಕ್ಷಣೆ ಬಗ್ಗೆ ಯಾವ ವೇದಿಕೆಯಲ್ಲಿ ನಿಂತು ಅವರುಮಾತನಾಡುತ್ತಿದ್ದಾರೋ, ಅದೇ ವೇದಿಕೆಯಲ್ಲಿ ನಾಯಕರೊಬ್ಬರು ಬೋಫೋರ್ಸ್ ಹಗರಣದ ಬಗ್ಗೆ ನೆನಪಿಸಿದರು.ಸತ್ಯ ಯಾವತ್ತಾದರೂ ಹೊರಗೆ ಬರಲೇ ಬೇಕಿದೆ.ಕೋಲ್ಕತ್ತದಲ್ಲಿ ನಡೆದದ್ದೂ ಅದೇ,
ನಮ್ಮ ಪಕ್ಷ ಮತ್ತು ಸರ್ಕಾರದ ಕೆಲಸಗಳು ವಿಪಕ್ಷಗಳ ನಿದ್ದೆಗೆಡಿಸಿವೆ.ಹಾಗಾಗಿ 2019ರಲ್ಲಿ ಸೋಲು ಖಚಿತ ಎಂದು ಅರಿತ ವಿಪಕ್ಷಗಳು ಈಗಲೇ ನೆಪಗಳನ್ನು ಹೇಳುತ್ತಿವೆ.

ಇವಿಎಂನ್ನು ವಿಲನ್ ಮಾಡಲಾಗುತ್ತಿದೆ.ಎಲ್ಲ ರಾಜಕೀಯ ಪಕ್ಷಗಳು ಗೆಲುವು ಬಯಸುವುದು ಸಹಜ.ಆದರೆ ಕೆಲವು ಪಕ್ಷಗಳು ಸಾರ್ವಜನಿಕರನ್ನು ಲಘುವಾಗಿ ತೆಗೆದುಕೊಳ್ಳುತ್ತಿವೆ. ಜನರು ಮೂರ್ಖರು ಎಂದು ತಿಳಿದುಕೊಂಡು ಇವರು ತಮ್ಮ ಬಣ್ಣ ಬದಲಿಸುತ್ತಲೇ ಇರುತ್ತಾರೆ ಎಂದು ಮೋದಿ ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಖ್ ಅಬ್ದುಲ್ಲಾ ಅವರು ಶನಿವಾರ ನಡೆದ ರ‍್ಯಾಲಿಯಲ್ಲಿ ಇವಿಎಂ ಮೆಷೀನ್‍ಗಳು ಚೋರ್ ಮೆಷೀನ್ ಎಂದು ಹೇಳಿರುವುದಕ್ಕೆ ಮೋದಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಆರ್ಥಿಕವಾಗಿ ಹಿಂದುಳಿದವರಿಗ ಶೇ.10 ಮೀಸಲಾತಿ ನೀಡುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಮೋದಿ, ಈ ನಿರ್ಧಾರದ ಬಗ್ಗೆ ತನ್ನನ್ನು ಟೀಕಿಸಲಾಗಿತ್ತು. ವಿಪಕ್ಷಗಳ ಕೈಲಾಗದೇ ಇರುವುದಕ್ಕೆ ಅವರು ವದಂತಿ ಹಬ್ಬಿಸುತ್ತಿದ್ದಾರೆ

ಚುನಾವಣೆ ಸಂದರ್ಭದಲ್ಲಿಯೇ ಶೇ. 10 ಮೀಸಲಾತಿ ಮಸೂದೆ ನಾವು ಜಾರಿ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸುವವರಲ್ಲಿ ನಾನೊಂದು ಪ್ರಶ್ನೆ ಕೇಳಲು ಬಯಸುತ್ತೇನೆ. ದೇಶದಲ್ಲಿ ಚುನಾವಣೆ ಇಲ್ಲದೇ ಇದ್ದದ್ದು ಯಾವಾಗ?

ಮಹಾರಾಷ್ಟ್ರದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರವನ್ನು ಟೀಕಿಸಿದ ಮೋದಿ, 60-65 ವರ್ಷ ಆಡಳಿತ ನಡೆಸಿದ ಅವರು 32 ಲಕ್ಷ ಹೆಕ್ಟೇರ್ ಭೂಮಿಯನ್ನಷ್ಟೇ ಕೃಷಿ ಭೂಮಿಯನ್ನಾಗಿಸಿದ್ದರು.ಆದರೆ ಕಳೆದ ಮೂರು ವರ್ಷಗಳಲ್ಲಿ ನಾವು32 ಲಕ್ಷ ಹೆಕ್ಟೇರ್ ಅನ್ನು40 ಲಕ್ಷ ಹೆಕ್ಟೇರ್ ಕೃಷಿ ಭೂಮಿಯನ್ನಾಗಿ ಮಾಡಿದ್ದೇವೆ.

ಇಂದು ಭಾರತ ಆರ್ಥಿಕವಾಗಿ ಮುಂದೆ ಸಾಗಿದೆ.ಈ ಹಿಂದೆ ಭಾರತದಲ್ಲಿನ ಹಗರಣಗಳ ಬಗ್ಗೆ ಜಗತ್ತು ಮಾತನಾಡುತ್ತಿತ್ತು.ಆದರೆ ಈಗ ಆರ್ಥಿಕ ಅಭಿವೃದ್ಧಿ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ವಿಶ್ವವೇ ಮಾತನಾಡುತ್ತಿದೆ ಎಂದಿದ್ದಾರೆ.

‘ದೇಶವೇ ಬಿಜೆಪಿ ಕುಟುಂಬ’

ಕೋಲ್ಕತ್ತ ರ‍್ಯಾಲಿ ವೇದಿಕೆಯಲ್ಲಿ ದೊಡ್ಡ ರಾಜಕಾರಣಿಗಳ ಮಕ್ಕಳನ್ನು ಬಿಟ್ಟರೆ ಬೇರೆ ಯಾರಿಗೂ ಜಾಗ ಇರಲಿಲ್ಲ. ಮಹಾಘಟಬಂಧನ್‌ ನಾಯಕರು ತಮ್ಮ ಕುಟುಂಬ ಮತ್ತು ಮಕ್ಕಳನ್ನು ಬೆಳೆಸಲು ಇಂತಹ ವೇದಿಕೆ ಬಳಸಿಕೊಳ್ಳುತ್ತಾರೆ ಎಂದು ಮೋದಿ ಟೀಕಿಸಿದರು.

‘ಬಿಜೆಪಿಯು ದೇಶವನ್ನೇ ತನ್ನ ಕುಟುಂಬ ಮತ್ತು ಎಲ್ಲ ಪ್ರಜೆಗಳನ್ನು ತನ್ನ ಮಕ್ಕಳು ಎಂದು ಭಾವಿಸಿದೆ. ಹೀಗಾಗಿ ಬಿಜೆಪಿಯು ಸದಾ ದೇಶ ಮತ್ತು ದೇಶದ ಪ್ರಜೆಗಳ ಅಭಿವೃದ್ಧಿಯ ಬಗ್ಗೆ ಯೋಚಿಸುತ್ತದೆ’ ಎಂದು ಅವರು ಹೇಳಿದರು.

ಮೇಲ್ವರ್ಗದ ಬಡವರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ನಿರ್ಧಾರ ವಿರೋಧ ಪಕ್ಷಗಳ ನಿದ್ದೆಗೆಡಿಸಿದೆ. ಹೀಗಾಗಿ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿವೆ ಎಂದರು.

‘ಇದು ಚುನಾವಣೆ ದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವಲ್ಲ. ನಮ್ಮ ದೇಶದಲ್ಲಿ ಯಾವಾಗ ಚುನಾವಣೆ ಇರುವುದಿಲ್ಲ ಹೇಳಿ. ಮೂರು ತಿಂಗಳ ಮೊದಲಾಗಿದ್ದರೆ ಐದು ರಾಜ್ಯಗಳ ಚುನಾವಣೆ, ಅದಕ್ಕೂ ಮೊದಲಾಗಿದ್ದಾರೆ ಕರ್ನಾಟಕ ಚುನಾವಣೆ, ಗುಜರಾತ್‌ ಚುನಾವಣೆಗಳಿದ್ದವು. ಹೀಗೆ ಒಂದಿಲ್ಲ ಒಂದು ಚುನಾವಣೆ ಇದ್ದೆ ಇರುತ್ತವೆ’ ಎಂದರು.

***

125 ಕೋಟಿ ಭಾರತೀಯರ ಕನಸು, ಆಸೆ, ಆಕಾಂಕ್ಷೆಗಳ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ

-ನರೇಂದ್ರ ಮೋದಿ, ಪ್ರಧಾನಿ

ಮಹಾಘಟಬಂಧನ್‌ ಸೈದ್ಧಾಂತಿಕ ನಿಲುವುಗಳಿಲ್ಲದ ಟೊಳ್ಳು ಜನರ ಮೈತ್ರಿಕೂಟ. ಮೋದಿ ಮತ್ತು ಬಿಜೆಪಿ ವಿರೋಧಿ ಮಾತ್ರವಲ್ಲ, ಪ್ರಜಾತಂತ್ರ ವಿರೋಧಿಯೂ ಹೌದು!

-ಯೋಗೇಂದ್ರ ಯಾದವ್‌,ಸ್ವರಾಜ್‌ ಇಂಡಿಯಾ ಅಧ್ಯಕ್ಷ

ಮುಂದಿನ ಚುನಾವಣೆ 56 ಇಂಚಿನ ಎದೆಯ ಮೋದಿ ಮತ್ತು ಕಿಚಡಿ ಪಕ್ಷಗಳ ಮೈತ್ರಿಕೂಟದ ನಡುವೆ ನಡೆಯುತ್ತದೆ

-ಸಿದ್ಧಾರ್ಥ ನಾಥ್‌ ಸಿಂಗ್‌, ಉತ್ತರ ಪ್ರದೇಶದ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.