ADVERTISEMENT

ವಿಪಕ್ಷಗಳ ಸಭೆ: ಒವೈಸಿ ಪಕ್ಷಕ್ಕೆ ಸಿಗದ ಆಹ್ವಾನ, ನಾವು ರಾಜಕೀಯ ‘ಅಸ್ಪೃಶ್ಯರು’ –ಪಠಾಣ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜುಲೈ 2023, 7:35 IST
Last Updated 19 ಜುಲೈ 2023, 7:35 IST
ಅಸಾದುದ್ದೀನ್‌ ಒವೈಸಿ
ಅಸಾದುದ್ದೀನ್‌ ಒವೈಸಿ   

ನವದೆಹಲಿ: ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ವಿರೋಧ ಪಕ್ಷಗಳ ಸಭೆಗೆ ತಮಗೆ ಆಹ್ವಾನ ನೀಡದಿರುವುದಕ್ಕೆ ಎಐಎಂಐಎಂ ಪಕ್ಷದ ನಾಯಕ ವಾರಿಸ್ ಪಠಾಣ್ ಆಕ್ರೋಶ ಹೊರಹಾಕಿದ್ದಾರೆ.

ವಿಪಕ್ಷಗಳ ಸಭೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಾತ್ಯತೀತ ಪಕ್ಷಗಳು ಎಂದು ಕರೆಯಲ್ಪಡುವವರು ಸಭೆಗೆ ನಮ್ಮನ್ನು ಆಹ್ವಾನಿಸಿಲ್ಲ. ನಾವು ಅವರಿಗೆ ರಾಜಕೀಯ ಅಸ್ಪೃಶ್ಯರಂತೆ ಕಂಡಿರಬಹುದು. ಬಿಹಾರ ಸಿಎಂ ನಿತೀಶ್ ಕುಮಾರ್, ಉದ್ಧವ್ ಠಾಕ್ರೆ ಮತ್ತು ಮೆಹಬೂಬಾ ಮುಫ್ತಿ ಸೇರಿದಂತೆ ಒಂದು ಕಾಲದಲ್ಲಿ ಭಾರತೀಯ ಜನತಾ ಪಕ್ಷದಲ್ಲಿದ್ದ (ಬಿಜೆಪಿ) ನಾಯಕರು ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದು ಗುಡುಗಿದ್ದಾರೆ.

‘ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಕಾಂಗ್ರೆಸ್ ಅನ್ನು ದುರುಪಯೋಗಪಡಿಸಿಕೊಂಡಿರುವುದನ್ನು ನಾವು ನೋಡಿದ್ದೇವೆ. ಆದರೆ, ಅವರು ಬೆಂಗಳೂರಿನ ಸಭೆಯಲ್ಲಿ ಕುಳಿತಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ನಾವು ಸಹ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪಣ ತೊಟ್ಟಿದ್ದೇವೆ. ಆದರೆ ಅವರು (ವಿರೋಧ ಪಕ್ಷಗಳು) ಅಸಾದುದ್ದೀನ್‌ ಒವೈಸಿ ಸೇರಿದಂತೆ ನಮ್ಮ ಪಕ್ಷವನ್ನು (ಎಐಎಂಐಎಂ) ಕಡೆಗಣಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮಣಿಸಲು ತಂತ್ರ ಹೆಣೆಯುತ್ತಿರುವ 26 ವಿರೋಧ ಪಕ್ಷಗಳು ಒಗ್ಗೂಡಿ ‘ಭಾರತೀಯ ರಾಷ್ಟ್ರೀಯ ಅಭಿವೃದ್ಧಿಶೀಲ ಎಲ್ಲರನ್ನೂ ಒಳಗೊಳ್ಳುವ ಮೈತ್ರಿಕೂಟ’ (ಇಂಡಿಯನ್‌ ನ್ಯಾಷನಲ್‌ ಡೆವಲಪ್‌ಮೆಂಟಲ್‌ ಇನ್‌ಕ್ಲೂಸಿವ್‌ ಅಲಯನ್ಸ್– ‘ಇಂಡಿಯಾ’‌) ರಚಿಸಿಕೊಂಡಿದ್ದು, ಚುನಾವಣಾ ರಾಜಕೀಯದತ್ತ ಒಂದು ಹೆಜ್ಜೆ ಮುಂದಿಟ್ಟಿವೆ.

ಮೈತ್ರಿಕೂಟದ ಮುಂದಿನ ಸಭೆಯನ್ನು ಶೀಘ್ರದಲ್ಲಿ ಮುಂಬೈಯಲ್ಲಿ ನಡೆಸಿ, 11 ಸದಸ್ಯರ ಸಮನ್ವಯ ಸಮಿತಿ ರಚಿಸಲು ಸಭೆಯಲ್ಲಿ ಪಾಲ್ಗೊಂಡ ನಾಯಕರು ತೀರ್ಮಾನಿಸಿದ್ದಾರೆ.

ಶಕ್ತಿ ಪ್ರದರ್ಶಿಸಿದ ಮೋದಿ ಬಳಗ

ಎನ್‌ಡಿಎ ಮೈತ್ರಿಕೂಟದ 38 ಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ದೆಹಲಿಯಲ್ಲಿ ಮಂಗಳವಾರ ‘ಶಕ್ತಿ ಪ್ರದರ್ಶನ’ದ ಸಭೆ ನಡೆಸಿ ವಿಪಕ್ಷಗಳ ‘ಮಹಾ ಮೈತ್ರಿಕೂಟ’ಕ್ಕೆ ಸೆಡ್ಡು ಹೊಡೆದಿದ್ದಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪಮುಖ್ಯಮಂತ್ರಿ ಅಜಿತ್‌ ಪವಾರ್‌, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಇ.ಪಳನಿಸ್ವಾಮಿ, ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್‌ ರಾಮ್‌ ಮಾಂಝಿ, ಮೈತ್ರಿಕೂಟದ ಮುಖಂಡರಾದ ಚಿರಾಗ್‌ ಪಾಸ್ವಾನ್‌, ಉಪೇಂದ್ರ ಸಿಂಗ್‌ ಕುಶ್ವಾಹ್‌, ಓಂ ಪ್ರಕಾಶ್‌ ರಾಜ್‌ಭರ್‌ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದರು.

ಇವನ್ನೂ ಓದಿ...

ಎನ್‌ಡಿಎ ಮಣಿಸಲು ‘ಇಂಡಿಯಾ’ ಅಣಿ: ಬಿಜೆಪಿಯೇತರ 26 ವಿರೋಧ ಪಕ್ಷಗಳ ಮಹಾ ಮೈತ್ರಿಕೂಟ

INDIA ಒಕ್ಕೂಟದ ವಿರುದ್ಧ ಶಕ್ತಿ ಪ್ರದರ್ಶಿಸಿದ ಮೋದಿ ಬಳಗ

ಇದು ಢೋಂಗಿ ಬಾಬಾ –38 ಕಳ್ಳರ ಗುಂಪು: ಎನ್‌ಡಿಎ ಮೈತ್ರಿಕೂಟದ ಬಗ್ಗೆ ಎಎಪಿ ವ್ಯಂಗ್ಯ

Explainer: ವಿರೋಧ ಪಕ್ಷಗಳ ಒಕ್ಕೂಟಕ್ಕೆ I.N.D.I.A ಹೆಸರು ಬಂದಿದ್ದು ಹೇಗೆ?

ವಿಪಕ್ಷಗಳ ಒಕ್ಕೂಟಕ್ಕೆ 'ಇಂಡಿಯಾ' ಹೆಸರಿಡಲು ನಿತೀಶ್ ಕುಮಾರ್ ಹಿಂದೇಟು; ಯಾಕೆ ಗೊತ್ತೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.