ADVERTISEMENT

ರಾಣೆ ಹೇಳಿಕೆ ಖಂಡಿಸಿ ಶಿವಸೇನಾ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಕಲ್ಲು ತೂರಾಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಆಗಸ್ಟ್ 2021, 6:36 IST
Last Updated 24 ಆಗಸ್ಟ್ 2021, 6:36 IST
ಸಾಂದರ್ಭಿಕ ಚಿತ್ರ (ಕೃಪೆ – ಡೆಕ್ಕನ್ ಹೆರಾಲ್ಡ್)
ಸಾಂದರ್ಭಿಕ ಚಿತ್ರ (ಕೃಪೆ – ಡೆಕ್ಕನ್ ಹೆರಾಲ್ಡ್)   

ಮುಂಬೈ: ಕೇಂದ್ರ ಸಚಿವ ನಾರಾಯಣ ರಾಣೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ನೀಡಿರುವ ಹೇಳಿಕೆ ಖಂಡಿಸಿ ಶಿವಸೇನಾ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.

ನಾಸಿಕ್‌ನಲ್ಲಿ ರಾಣೆ ವಿರುದ್ಧ ಘೋಷಣೆಗಳನ್ನು ಕೂಗಿದ ಸೇನಾ ಕಾರ್ಯಕರ್ತರು ಬಿಜೆಪಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದ ವಿಡಿಯೊವನ್ನು ‘ಎಎನ್‌ಐ’ ಟ್ವೀಟ್ ಮಾಡಿದೆ.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಯಾವ ವರ್ಷ ಎಂಬುದನ್ನು ತಿಳಿಯದೇ ಇರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಸೋಮವಾರ ರಾಯಗಡದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ನಾರಾಯಣ ರಾಣೆ ಹೇಳಿದ್ದರು.

ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಧ್ವಜಾರೋಹಣ ನಡೆಸಿ ಭಾಷಣ ಮಾಡುತ್ತಿದ್ದ ವೇಳೆ ಸ್ವಾತಂತ್ರ್ಯ ಲಭಿಸಿದ ವರ್ಷವನ್ನು ಪಕ್ಕದವರಿಂದ ಕೇಳಿ ತಿಳಿದುಕೊಂಡು ಹೇಳಿದ್ದರು. ಇದನ್ನು ಉಲ್ಲೇಖಿಸಿ ರಾಣೆ ಹೇಳಿಕೆ ನೀಡಿದ್ದರು.

ರಾಣೆ ಹೇಳಿಕೆಗೆ ಶಿವಸೇನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಚಿವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.