ADVERTISEMENT

ಮಾಲೆಗಾಂವ್‌ ಮಾಜಿ ಮೇಯರ್‌ ಮೇಲೆ ಗುಂಡಿನ ದಾಳಿ

ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳಿಂದ ಕೃತ್ಯ

ಪಿಟಿಐ
Published 27 ಮೇ 2024, 16:04 IST
Last Updated 27 ಮೇ 2024, 16:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಾಸಿಕ್‌: ಮಹಾರಾಷ್ಟ್ರದ ಮಾಲೆಗಾಂವ್‌ನ ಮಾಜಿ ಮೇಯರ್‌, ಎಐಎಂಐಎಂ ನಾಯಕ ಅಬ್ದುಲ್‌ ಮಲಿಕ್‌ ಯೂನುಸ್‌ ಶೇಕ್‌(39) ಅವರ ಮೇಲೆ ಭಾನುವಾರ ತಡರಾತ್ರಿ ಗುಂಡಿನ ದಾಳಿ ನಡೆದಿದೆ.

ಮಾಲೆಗಾಂವ್‌ನ ಹಳೆಯ ಆಗ್ರಾ ರಸ್ತೆಯಲ್ಲಿರುವ ಕಟ್ಟಡ ಸಾಮಗ್ರಿಗಳ ಅಂಗಡಿಯೊಂದರ ಮುಂದೆ ಶೇಕ್‌ ಅವರು ನಿಂತಿದ್ದ ವೇಳೆ, ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು 3 ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಶೇಕ್‌ ಅವರ ಎದೆ ಮತ್ತು ಕಾಲಿನ ಭಾಗಕ್ಕೆ ಗುಂಡು ಬಿದ್ದಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಲೆಗಾಂವ್‌(ಕೇಂದ್ರ) ಶಾಸಕ ಮೊಹಮ್ಮದ್‌ ಇಸ್ಮಾಯಿಲ್‌ ಅಬ್ದುಲ್‌ ಖಾಲಿಕ್‌, ‘ಇತ್ತೀಚಿನ ದಿನಗಳಲ್ಲಿ ಮಾಲೆಗಾಂವ್‌ನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮಾಜಿ ಮೇಯರ್ ಮೇಲೆಯೇ ಈ ರೀತಿಯ ದಾಳಿಗಳು ನಡೆದರೆ, ಇನ್ನು ಸಾಮಾನ್ಯರ ಪರಿಸ್ಥಿತಿ ಏನು? ಈ ವಿಚಾರವನ್ನು ನಾನು ವಿಧಾನಸಭೆಯಲ್ಲಿ ಚರ್ಚಿಸಿ, ಗೃಹ ಸಚಿವಾಲಯದ ಗಮನಕ್ಕೆ ತರುತ್ತೇನೆ’ ಎಂಬುದಾಗಿ ಹೇಳಿದ್ದಾರೆ.

ADVERTISEMENT

ಮಾಜಿ ಮೇಯರ್‌ ಮೇಲೆ ಗುಂಡಿನ ದಾಳಿ ನಡೆದಿರುವ ವಿಚಾರ ಬೆಳಕಿಗೆ ಬರುತ್ತಲೇ, ಮಾಲೆಗಾಂವ್‌ನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ನಗರದಲ್ಲಿ ಪೊಲೀಸ್‌ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.