ನವದೆಹಲಿ: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯ ಫಲಿತಾಂಶವು ಆಡಳಿತಾರೂಢ ಎನ್‌ಡಿಎಗೆ ಭಾರಿ ಸಂಭ್ರಮ ತಂದಿಲ್ಲ. ಹಾಗಿದ್ದರೂ, ಮಹಾರಾಷ್ಟ್ರದಲ್ಲಿಅಧಿಕಾರ ಉಳಿಸಿಕೊಂಡ ಖುಷಿ ಎನ್‌ಡಿಎಗೆ ಇದೆ. ಹರಿಯಾಣದ ಮತದಾರ ಅತಂತ್ರ ಫಲಿತಾಂಶ ನೀಡಿದ್ದಾನೆ. ಅಲ್ಲಿ, ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರ ಹೊಮ್ಮಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ–ಶಿವಸೇನಾ ಮೈತ್ರಿಕೂಟವು 161 ಕ್ಷೇತ್ರಗಳಲ್ಲಿ ಗೆದ್ದಿದೆ. ಕಳೆದ ಬಾರಿ ಗೆದ್ದ 185 ಸ್ಥಾನಗಳಿಗೆ ಹೋಲಿಸಿದರೆ 24 ಕ್ಷೇತ್ರಗಳು ಕಡಿಮೆಯಾಗಿವೆ. ಈ ಬಾರಿ ಬಿಜೆಪಿಗೆ 105 ಮತ್ತು ಸೇನಾಕ್ಕೆ 56 ಕ್ಷೇತ್ರಗಳು ಸಿಕ್ಕಿವೆ.
ಹರಿಯಾಣದ ಫಲಿತಾಂಶ ಅಚ್ಚರಿದಾಯಕ. ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಇದೆ. ಕಳೆದ ಬಾರಿ 90ರ ಪೈಕಿ 47 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ 39 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಕಳೆದ ಬಾರಿ 15 ಕ್ಷೇತ್ರಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ತನ್ನ ಶಕ್ತಿಯನ್ನು ದುಪ್ಪಟ್ಟಾಗಿಸಿದೆ. 30 ಕ್ಷೇತ್ರಗಳನ್ನು ತನ್ನ ಬಗಲಿಗೆ ಹಾಕಿಕೊಂಡಿದೆ.
ಮಹಾರಾಷ್ಟ್ರದ ಎರಡೂ ಮೈತ್ರಿಕೂಟಗಳಲ್ಲಿ ಕಿರಿಯ ಪಾಲುದಾರ ಪಕ್ಷಗಳ ವರ್ಚಸ್ಸು ವೃದ್ಧಿಯಾಗಿರುವುದು ಈ ಬಾರಿಯ ಫಲಿತಾಂಶದ ವಿಶೇಷ. ಕಾಂಗ್ರೆಸ್–ಎನ್‌ಸಿಪಿ ಮೈತ್ರಿಕೂಟದಲ್ಲಿ ಎನ್‌ಸಿಪಿಯ ಬಲ ವೃದ್ಧಿಯಾಗಿದೆ. ಕಾಂಗ್ರೆಸ್‌ಗಿಂತ ಎನ್‌ಸಿಪಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ–ಸೇನಾ ಮೈತ್ರಿಕೂಟದಲ್ಲಿ ಬಿಜೆಪಿಯೇ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಆದರೆ, ಎರಡೂ ಪಕ್ಷಗಳು ಗೆದ್ದಿರುವ ಸ್ಥಾನಗಳ ಅಂತರ ಕಡಿಮೆಯಾಗಿದೆ. ಹಾಗಾಗಿ, ಸೇನಾದ ಚೌಕಾಸಿ ಶಕ್ತಿ ಹೆಚ್ಚಾಗಿದೆ.
ಐದು ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಎರಡೂ ರಾಜ್ಯಗಳಲ್ಲಿಯೂ ಮತದಾರ ಬಹಳ ಭಿನ್ನ ರೀತಿಯಲ್ಲಿ ಮತ ಹಾಕಿರುವುದು ಇನ್ನೊಂದು ವಿಶೇಷ.
ಎರಡೂ ರಾಜ್ಯಗಳಲ್ಲಿ ಬಿಜೆಪಿಯ ಪ್ರಚಾರ ಈ ಬಾರಿ ಭಾರಿ ಅಬ್ಬರ ಪಡೆದಿತ್ತು. ‘ರಾಷ್ಟ್ರೀಯತೆ’ಯೇ ಪ್ರಚಾರದ ಕೇಂದ್ರ ಬಿಂದುವಾಗಿತ್ತು. ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿ, ರಾಷ್ಟ್ರೀಯ ಪೌರತ್ವ ನೋಂದಣಿ, ತ್ರಿವಳಿ ತಲಾಖ್ ರದ್ದತಿ ಮಸೂದೆ, ಬಾಲಾಕೋಟ್ ಮೇಲೆ ವಾಯು ದಾಳಿಯಂತಹ ವಿಷಯಗಳನ್ನೇ ಬಿಜೆಪಿ ನಾಯಕರು ಜೋರು ಧ್ವನಿಯಲ್ಲಿ ಪ್ರಸ್ತಾಪಿಸಿದ್ದರು. ಆದರೆ, ವಿರೋಧ ಪಕ್ಷಗಳು ಪ್ರಸ್ತಾಪಿಸಿದ ಆರ್ಥಿಕ ಹಿಂಜರಿತ, ನಿರುದ್ಯೋಗದಂತಹ ವಿಚಾರಗಳು ಮತದಾರನ ಮೇಲೆ ಪ್ರಭಾವ ಬೀರಿವೆ ಎಂಬುದನ್ನು ಫಲಿತಾಂಶವು ಸಾಬೀತು ಮಾಡಿದೆ.
ಯಜಮಾನಿಕೆ ಸ್ಥಾನದಿಂದ ಸರ್ವಾಧಿಕಾರದತ್ತ ಬಿಜೆಪಿ ಸಾಗುತ್ತಿದೆ ಎಂಬುದು ರಾಜಕೀಯ ವಲಯಗಳಲ್ಲಿ ಚರ್ಚೆ ಆಗುತ್ತಿತ್ತು. ಆದರೆ, ಈ ಚುನಾವಣೆಯ ಫಲಿತಾಂಶವು ಬಿಜೆಪಿಗೆ ಅಂಕುಶ ಹಾಕಿದೆ ಎನ್ನಬಹುದು. ತನ್ನ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಿದ ಅಂಶಗಳು ಯಾವುವು ಎಂಬುದರತ್ತ ಬಿಜೆಪಿ ಗಮನ ಹರಿಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಹರಿಯಾಣದಲ್ಲಿ 75 ಮತ್ತು ಮಹಾರಾಷ್ಟ್ರದಲ್ಲಿ ಏಕಾಂಗಿಯಾಗಿ ಸರಳ ಬಹುಮತದ ಗುರಿಯನ್ನು ಬಿಜೆಪಿ ಹಾಕಿಕೊಂಡಿತ್ತು ಎಂಬ ಹಿನ್ನೆಲೆಯಲ್ಲಿ ಆತ್ಮಾವಲೋಕನದ ಅಗತ್ಯ ಇನ್ನೂ ಹೆಚ್ಚು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.