ADVERTISEMENT

ಮಹಾರಾಷ್ಟ್ರ: ‘ವಂದೇ ಮಾತರಂ’ ಕುರಿತ ಹೇಳಿಕೆ ವಿವಾದ– ಕಲಾಪ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 13:41 IST
Last Updated 19 ಜುಲೈ 2023, 13:41 IST
ಪಿಟಿಐ ಚಿತ್ರ
   ಪಿಟಿಐ ಚಿತ್ರ

ಮುಂಬೈ: ‘ವಂದೇ ಮಾತರಂ’ ಗೀತೆ ಕುರಿತ ಹೇಳಿಕೆಯಿಂದ ಉಂಟಾದ ಗದ್ದಲದ ಕಾರಣ ಮಹಾರಾಷ್ಟ್ರ ವಿಧಾನಸಭೆಯ ಕಲಾಪವನ್ನು ಬುಧವಾರ ಕೆಲಕಾಲ ಮುಂದೂಡಲಾಗಿತ್ತು.

ಕಲಾಪದ ವೇಳೆ ಸಂಭಾಜಿನಗರ ಜಿಲ್ಲೆಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ಕುರಿತ ಚರ್ಚೆಯನ್ನು ಕೈಗೆತ್ತಿಕೊಂಡ ಸಮಾಜವಾದಿ ಪಕ್ಷದ ಶಾಸಕ ಅಬು ಆಝ್ಮಿ ಅವರು, ‘ಭಾರತದಲ್ಲಿ ವಾಸಿಸಬೇಕೆಂದರೆ ವಂದೇ ಮಾತರಂ ಗೀತೆಯನ್ನು ಕಡ್ಡಾಯವಾಗಿ ಹಾಡಬೇಕು ಎಂದು ಕೆಲವರು ಹೇಳುತ್ತಾರೆ. ನಾವು ಒಂದು ದೇವರಲ್ಲಿ ಮಾತ್ರ ನಂಬಿಕೆ ಇಟ್ಟಿರುವವರು. ಹಾಗಾಗಿ ವಂದೇ ಮಾತರಂ ಹಾಡಲಾಗುವುದಿಲ್ಲ’ ಎಂದು  ಹೇಳಿದರು.

ಈ ಹೇಳಿಕೆಯನ್ನು ಬಲವಾಗಿ ವಿರೋಧಿಸಿದ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದರು. ಶಾಂತಿ ಕಾಯ್ದುಕೊಳ್ಳುವಂತೆ ಶಾಸಕರಿಗೆ ಮನವಿ ಮಾಡಿದ ಸಭಾಧ್ಯಕ್ಷ ರಾಹುಲ್‌ ನಾರ್ವೇಕರ್‌ ಅವರು, ‘ಆಝ್ಮಿ ಅವರ ಹೇಳಿಕೆಯು ವಿಷಯಕ್ಕೆ ಸಂಬಂಧಿಸಿಲ್ಲ. ಪಟ್ಟಿ ಮಾಡಲಾಗಿರುವ ವಿಷಯಗಳ ಮೇಲೆ ಮಾತ್ರ ಚರ್ಚೆಯನ್ನು ಕೇಂದ್ರೀಕರಿಸಬೇಕು’ ಎಂದರು. ಆದರೂ ಬಿಜೆಪಿ ಶಾಸಕರು ಪ್ರತಿಭಟನೆ ಮುಂದುವರೆಸಿದ ಕಾರಣ ಕಲಾಪವನ್ನು 10 ನಿಮಿಷಗಳ ಕಾಲ ಅವರು ಮುಂದೂಡಿದರು.

ADVERTISEMENT

ಬಿಜೆಪಿ ಆಕ್ರೋಶ: ‘ಎಸ್‌ಪಿ ಶಾಸಕ ಅಬು ಆಝ್ಮಿ ಅವರು ವಂದೇ ಮಾತರಂ ಗೀತೆ ಕುರಿತು ನೀಡಿರುವ ಹೇಳಿಕೆಯು ‘ಇಂಡಿಯಾ’ದ (ಐ.ಎನ್.ಡಿ.ಐ.ಎ.) ಆಶಯವೇ’ ಎಂದು ಬಿಜೆಪಿ ಪ್ರಶ್ನಿಸಿದೆ.

ಬಿಜೆಪಿಗೆ ಎದುರಾಗಿ ರಚಿಸಲಾಗಿರುವ ವಿರೋಧ ಪಕ್ಷಗಳ ಒಕ್ಕೂಟಕ್ಕೆ ‘ಇಂಡಿಯಾ’ ಎಂದು ಹೆಸರಿಟ್ಟಿರುವುದನ್ನು ಆಝ್ಮಿ ಅವರ ಹೇಳಿಕೆ ಜೊತೆ ಸಮೀಕರಿಸಿ ಬಿಜೆಪಿಯ ರಾಷ್ಟ್ರೀಯ ವಕ್ತಾರ ಶಹ್ಜಾದ್‌ ಪೂನವಾಲ ಅವರು ಹೀಗೆ ವ್ಯಂಗ್ಯವಾಡಿದ್ದಾರೆ.

‘ನಾನು ವಂದೇ ಮಾತರಂ ಹಾಡುವುದಿಲ್ಲ. ನನ್ನ ಧರ್ಮವು ಅವಕಾಶ ನೀಡದ ಕಾರಣ ಗೀತೆಗೆ ತಲೆಬಾಗುವುದಿಲ್ಲ ಎಂದು ಎಸ್‌ಪಿ ಶಾಸಕ ಅಬು ಆಝ್ಮಿ ಹೇಳಿದ್ದಾರೆ. ಎಸ್‌ಪಿ ಕೂಡಾ ‘ಇಂಡಿಯಾ’ದ ಭಾಗವಾಗಿರುವ ಕಾರಣ, ಈ ಹೇಳಿಕೆಯು ‘ಇಂಡಿಯಾ’ದ ಆಶಯವೇ ಅಥವಾ ಅದರ ವಿರೋಧಿ ಆಶಯವೇ ಎಂದು ತಿಳಿಸಬೇಕು’ ಎಂದು ಪೂನವಾಲ ಟ್ವೀಟ್‌ ಮಾಡಿದ್ದಾರೆ.  

ವಿರೋಧ ಪಕ್ಷಗಳ ಒಕ್ಕೂಟದ ಹೆಸರಲ್ಲಿ ‘ಇಂಡಿಯಾ’ ಇದೆ. ಆದರೆ ಅವರ ಕಾರ್ಯಸೂಚಿಯಲ್ಲಿ ಇಂಡಿಯಾ ಇಲ್ಲ ಎಂದು ಕಿಡಿಕಾರಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಝ್ಮಿ ಹೇಳಿಕೆ ಕುರಿತು ತಮ್ಮ ನಿಲುವು ಏನೆಂದು ತಿಳಿಸುತ್ತಾರಾ ಎಂದು ಪ್ರಶ್ನಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.