ADVERTISEMENT

ಬಿಜೆಪಿಯಿಂದ ಪ್ರಣಾಳಿಕೆ ಜಾರಿ, ಕಾಂಗ್ರೆಸ್‌ನಿಂದ ಜನರ ವಿಭಜನೆ: ಮಹಾರಾಷ್ಟ್ರ ಸಚಿವ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 6:08 IST
Last Updated 18 ಅಕ್ಟೋಬರ್ 2024, 6:08 IST
<div class="paragraphs"><p>ಕಾಂಗ್ರೆಸ್, ಬಿಜೆಪಿ</p></div>

ಕಾಂಗ್ರೆಸ್, ಬಿಜೆಪಿ

   

ಮುಂಬೈ: ಬಿಜೆಪಿಯು ಪ್ರಣಾಳಿಕೆ ಜಾರಿ ಮಾಡಿದರೆ, ಕಾಂಗ್ರೆಸ್ ಪಕ್ಷವು ಮತದಾರರನ್ನು ವಿಭಜಿಸುತ್ತದೆ ಎಂದು ಮಹಾರಾಷ್ಟ್ರ ಸಚಿವ, ಬಿಜೆಪಿ ನಾಯಕ ಸುಧೀರ್‌ ಮುಂಗಂಟಿವಾರ್‌ ಆರೋಪಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಸುಧೀರ್, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ರೂಪಿಸಲು ಬಿಜೆಪಿಯು ಜನರಿಂದ ಸಲಹೆಗಳನ್ನು ಕೇಳಿದೆ ಎಂದಿದ್ದಾರೆ.

ADVERTISEMENT

'ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯನ್ನು ಕಾರ್ಯರೂಪಕ್ಕೆ ತರದೆ ಮತದಾರರನ್ನು ವಂಚಿಸುತ್ತದೆ. ಆದರೆ, ಬಿಜೆಪಿಯು ತನ್ನ ಪ್ರಣಾಳಿಕೆ ಜಾರಿಯಾಗುವಂತೆ ನೋಡಿಕೊಳ್ಳುತ್ತದೆ. ಜನರ ಜೀವನಮಟ್ಟ ಸುಧಾರಿಸುವ ಕ್ರಮಗಳನ್ನು ಕೈಗೊಳ್ಳಲು ನಿಶ್ಚಯಿಸಿದ್ದೇವೆ' ಎಂದು ಹೇಳಿದ್ದಾರೆ.

ಸರ್ಕಾರವು ವೇತನ ಸೇರಿದಂತೆ, ಅಗತ್ಯ ವೆಚ್ಚಗಳನ್ನು ಕಡಿತಗೊಳಿಸಿ ಕಲ್ಯಾಣ ಯೋಜನೆಗಳಿಗೆ ಹಣ ಹೊಂದಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವುದಕ್ಕೆ ತಿರುಗೇಟು ನೀಡಿರುವ ಸುಧೀರ್‌, ಯೋಜನೆಗಳ ಬಗ್ಗೆ ಯಾವುದೇ ಟೀಕೆಗಳು ಇರಲಿಲ್ಲ. ಆದರೆ, ಯೋಜನೆಗಳ ಅಡಿಯಲ್ಲಿ ಜನರು ಹಣ ಪಡೆದ ನಂತರ, ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ ಎಂದಿದ್ದಾರೆ.

ಕಲ್ಯಾಣ ಕಾರ್ಯಕ್ರಮಗಳಾದ 'ಮುಖ್ಯಮಂತ್ರಿ ಲಡ್ಕಿ ಬೆಹಿನ್‌ ಯೋಜನೆ'ಗಳಿಗಿಂತಲೂ ಅಪಾರ ಹಣ 6ನೇ ಹಾಗೂ 7ನೇ ವೇತನ ಆಯೋಗದ ಜಾರಿಗೆ ಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

'ಕಲ್ಯಾಣ ಯೋಜನೆಗಳು ಮಹಿಳೆಯರ ಕೊಳ್ಳುವ ಶಕ್ತಿಯನ್ನು ಸುಧಾರಿಸಿವೆ. ಇದು ಮಾರುಕಟ್ಟೆ ಪುನಶ್ಚೇತನಕ್ಕೂ ಕಾರಣವಾಗಿದೆ' ಎಂದು ಪ್ರತಿಪಾದಿಸಿರುವ ಅವರು, 'ನಮ್ಮ ಸರ್ಕಾರದ ಅವಧಿಯಲ್ಲಿ ಮಹಾರಾಷ್ಟ್ರ ಜನರ ತಲಾದಾಯ ₹ 1.52 ಲಕ್ಷಕ್ಕೆ ಏರಿಕೆಯಾಗಿದೆ. ನಾವು ಗುಜರಾತ್‌ಗಿಂತಲೂ ಮುಂದಿದ್ದೇವೆ' ಎಂದಿದ್ದಾರೆ.

ಮಹಾರಾಷ್ಟ್ರ ಸರ್ಕಾರ, ವಾರ್ಷಿಕ ₹ 2.5 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿಲ್ಲದ ಕುಟುಂಬಗಳ ಮಹಿಳೆಯರಿಗೆ ಲಡ್ಕಿ ಬೆಹಿನ್‌ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ₹ 1,500 ನೀಡುತ್ತಿದೆ.

288 ಸದಸ್ಯ ಬಲದ 'ಮಹಾ' ವಿಧಾನಸಭೆಗೆ ನವೆಂಬರ್‌ 20ರಂದು ನಡೆಯಲಿದ್ದು, ನವೆಂಬರ್‌ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ, ಬಿಜೆಪಿ ಹಾಗೂ ಅಜಿತ್‌ ಪವಾರ್‌ ಅವರ ಎನ್‌ಸಿಪಿ ಒಳಗೊಂಡ ಆಡಳಿತಾರೂಢ 'ಮಹಾಯುತಿ' ಮೈತ್ರಿಕೂಟ ಮತ್ತು ಉದ್ಧವ್‌ ಠಾಕ್ರೆ ಬಣದ ಶಿವಸೇನಾ, ಶರದ್‌ ಪವಾರ್‌ ಅವರ ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಪಕ್ಷಗಳನ್ನೊಳಗೊಂಡ 'ಮಹಾ ವಿಕಾಸ ಆಘಾಡಿ' ಅಧಿಕಾರಕ್ಕಾಗಿ ಭಾರಿ ಪೈಪೋಟಿ ನಡೆಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.