ಛಗನ್ ಭುಜಬಲ್ ಈ ಬಾರಿಯ ಚುನಾವಣೆಯಲ್ಲಿ ಮರಾಠ ಸಮುದಾಯದ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ಭುಜಬಲ್ ಅವರನ್ನು ಸೋಲಿಸಲೇಬೇಕು ಎಂದು ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಅವರು ನಾಸಿಕ್ ಜಿಲ್ಲೆಯ ಮರಾಠರಿಗೆ ಮನವಿ ಮಾಡಿದ್ದಾರೆ.
ನಾಸಿಕ್ (ಮಹಾರಾಷ್ಟ್ರ): ಹಿಂದುಳಿದ ವರ್ಗಗಳ ನಾಯಕರಾಗಿರುವ ಛಗನ್ ಭುಜಬಲ್ ಅವರು ತವರು ಜಿಲ್ಲೆ ನಾಸಿಕ್‌ನಲ್ಲಿ ಬಹುಶಃ ಜೀವನದ ಅತಿದೊಡ್ಡ ರಾಜಕೀಯ ಸವಾಲನ್ನು ಎದುರಿಸುತ್ತಿದ್ದಾರೆ.
ಐದು ಬಾರಿ ಶಾಸಕರು ಮತ್ತು ಒಂದು ಅವಧಿಗೆ ಎಂಎಲ್‌ಸಿ ಆಗಿರುವ 77 ವರ್ಷದ ಭುಜಬಲ್, ಈಗ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ಭಾಗವಾಗಿದ್ದಾರೆ. ಅವರು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ನಾಸಿಕ್ ಜಿಲ್ಲೆಯ ಯೆವಲಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಭುಜಬಲ್ ಅವರು ತಮ್ಮ ಬಣ ತೊರೆದು, ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ ಸೇರಿದ್ದನ್ನು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ‘ವೈಯಕ್ತಿಕ’ವಾಗಿ ತೆಗೆದುಕೊಂಡಿದ್ದರು. ಆದ್ದರಿಂದ ಭುಜಬಲ್ ಅವರನ್ನು ಮಣಿಸಲು ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದಾರೆ. ಮರಾಠ ಸಮುದಾಯದ ಮುಖಂಡ, ಮಾಣಿಕ್‌ರಾವ್ ಶಿಂದೆ ಅವರು ಭುಜಬಲ್ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ. ಮಾಣಿಕ್‌ರಾವ್, ಮಾಜಿ ಶಾಸಕ ಮಧುಕರರಾವ್ ಶಿಂದೆ ಅವರ ಪುತ್ರ.
2023ರ ಜೂನ್– ಜುಲೈನಲ್ಲಿ ಎನ್‌ಸಿಪಿ ವಿಭಜನೆಯಾದ ಬಳಿಕ ಯೆವಲಾದಲ್ಲಿ ತಮ್ಮ ಮೊದಲ ಸಾರ್ವಜನಿಕ ಸಭೆಯಲ್ಲಿ ಮಾತನಾಡುವಾಗ ಶರದ್ ಪವಾರ್ ಅವರು, ‘ನಾನು ಕೆಲವು ಜನರನ್ನು ನಂಬಿ ತಪ್ಪು ಮಾಡಿದ್ದೇನೆ. ಆದರೆ ಆ ತಪ್ಪನ್ನು ಪುನರಾವರ್ತಿಸುವುದಿಲ್ಲ. ನೀವು ನನ್ನ ಮೇಲೆ ನಂಬಿಕೆಯಿಟ್ಟು ನಮ್ಮ ಪಕ್ಷಕ್ಕೆ ಮತ ಹಾಕಿದ್ದೀರಿ. ಆದರೆ ನನ್ನ ಲೆಕ್ಕಾಚಾರ ತಪ್ಪಾಗಿದ್ದು, ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ’ ಎಂದು ಹೇಳಿದ್ದರು.
ಈ ವಾರದ ಆರಂಭದಲ್ಲಿ ನಡೆದ ಚುನಾವಣಾ ರ್‍ಯಾಲಿಯೊಂದರಲ್ಲಿ ಭುಜಬಲ್ ವಿರುದ್ಧ ವಾಗ್ದಾಳಿ ನಡೆಸಿ, ‘ಅವರಿಗೆ ಸಿದ್ಧಾಂತದಲ್ಲಿ ನಂಬಿಕೆಯಿಲ್ಲ. ಅವರು ಪಕ್ಷ, ನಾಯಕತ್ವ ಮತ್ತು ಜನರಿಗೆ ದ್ರೋಹ ಮಾಡಿದ್ದಾರೆ. ಹಲವು ವರ್ಷ ಬೆಂಬಲ ನೀಡಿದ ಯೆವಲಾ ಕ್ಷೇತ್ರಕ್ಕೆ ಅವಮಾನ ಎಸಗಿದ್ದಾರೆ. ಆದ್ದರಿಂದ, ಅವರಿಗೆ ಪಾಠ ಕಲಿಸುವ ಸಮಯ ಈಗ ಕೂಡಿಬಂದಿದೆ. ಅವರನ್ನು ಮಣಿಸಲು ನಾನು ನಿಮಗೆ ಪೂರ್ಣ ಬೆಂಬಲ ನೀಡುತ್ತೇನೆ’ ಎಂದಿದ್ದಾರೆ.
ಶರದ್ ಪವಾರ್ ಅವರ ಹೇಳಿಕೆಗೆ ಭುಜಬಲ್, ‘ಶರದ್ ಪವಾರ್ ಸ್ಥಾಪಿಸಿರುವ ಎನ್‌ಸಿಪಿಯ ಸಿದ್ಧಾಂತ ಯಾವುದು? ವಿಜಯಸಿನ್ಹ ಮೋಹಿತೆ ಪಾಟೀಲ್, ಪದ್ಮಸಿನ್ಹ ಪಾಟೀಲ್, ಜಯಂತ್ ಪಾಟೀಲ್, ಮಧುಕರ್ ಪಿಚಢ್ ಮತ್ತು ಛಗನ್ ಭುಜಬಲ್ ಅವರಂತಹ ನಾಯಕರ ಗುಂಪು ಸೇರಿಕೊಂಡು ಎನ್‌ಸಿಪಿ ಪಕ್ಷ ಸ್ಥಾಪಿಸಿದೆ’ ಎಂದು ತಿರುಗೇಟು ನೀಡಿದ್ದಾರೆ.
ಯೆವಲಾ ಕ್ಷೇತ್ರವು, ಮಹಾರಾಷ್ಟ್ರದ ‘ಈರುಳ್ಳಿ ವಲಯ’ದ ವ್ಯಾಪ್ತಿಗೆ ಬರುವ ಕಾರಣ ಈರುಳ್ಳಿ ಬೆಳೆಗಾರರ ಸಮಸ್ಯೆಯೂ ಚುನಾವಣೆಯ ವಿಷಯವಾಗಿದೆ. ‘ಈರುಳ್ಳಿ ವಲಯ’ದ ಮತದಾರರು ಲೋಕಸಭಾ ಚುನಾವಣೆಯಲ್ಲಿ ‘ಮಹಾಯುತಿ’ ಮೈತ್ರಿಕೂಟದ ರಾಜಕಾರಣಿಗಳು ಮತ್ತು ಅಭ್ಯರ್ಥಿಗಳಿಗೆ ಕಣ್ಣೀರು ತರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.