ಬೆಂಗಳೂರು: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಕೊಂಕು ಮಾತನಾಡಿರುವ ಶಿವಸೇನಾ ಯುಬಿಟಿ ಬಣದ ನಾಯಕ ಸಂಜಯ್ ರಾವುತ್ ಅವರನ್ನು ಬಿಜೆಪಿ ತೀವ್ರ ತರಾಟೆಗೆ ತೆಗೆದುಕೊಂಡಿದೆ.
‘ಈ ಫಲಿತಾಂಶವನ್ನು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಉದ್ಯಮಿ ಗೌತಮ್ ಅದಾನಿ ನಿರ್ಧರಿಸಿದ್ದಾರೆ, ಇದನ್ನು ಒಪ್ಪುವುದಿಲ್ಲ’ ಎಂದು ಸಂಜಯ್ ರಾವುತ್ ಕೆಂಡ ಕಾರಿದ್ದರು.
ಈ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿ ತೀವ್ರ ಅಸಮಾಧಾನ ಹೊರಹಾಕಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಷಹಜಾದ್ ಪೂನಾವಾಲಾ ಅವರು, ‘ಸಂಜಯ್ ರಾವುತ್ ಅವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಯಾರೂ ಅವರನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ’ ಎಂದು ಕಿಡಿಕಾರಿದ್ದಾರೆ.
‘ಸಂಜಯ್ ರಾವುತ್ ಅವರನ್ನು ಜನರೇ ಒಬ್ಬ ಜೋಕರ್ ಎಂದು ಕರೆಯುತ್ತಾರೆ. ಗಂಭೀರವಾಗಿ ಮಾತನಾಡದೇ ಜೋಕ್‌ಗಳನ್ನು ಮಾಡುತ್ತಾ ಗಮನ ಸೆಳೆಯಲು ಯತ್ನಿಸುತ್ತಾರೆ’ ಎಂದು ಹರಿಹಾಯ್ದಿದ್ದಾರೆ.
‘ವಿರೋಧ ಬಣದವರಿಗೆ ಏನಾಗಿದೆಯೋ ತಿಳಿಯದು. ತಾವು ಗೆದ್ದಾಗ ಎಲ್ಲ ಸರಿ ಇದೆ ಎನ್ನುತ್ತಾರೆ. ಸೋತಾಗ ಇವಿಎಂ ಕೈವಾಡ ಎನ್ನುತ್ತಾರೆ. ಅಷ್ಟೇ ಅಲ್ಲದೇ ಚುನಾವಣಾ ಆಯೋಗವನ್ನು, ಸಾಂವಿಧಾನಿಕ ಸಂಸ್ಥೆಗಳನ್ನು ಅಗೌರವದಿಂದ ಕಾಣುತ್ತಾರೆ. ಇವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ’ ಎಂದು ಪೂನಾವಾಲಾ ಹೇಳಿದ್ದಾರೆ.
ಫಲಿತಾಂಶದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಂಜಯ್ ರಾವುತ್, ‘ಭಾರಿ ಪ್ರಮಾಣದಲ್ಲಿ ಹಣ ಬಲ ಪ್ರಯೋಗಿಸಲಾಗಿದೆ. ಬಿಜೆಪಿ, ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಗೌತಮ್ ಅದಾನಿ ಅವರು ಚುನಾವಣಾ ಫಲಿತಾಂಶವನ್ನು ಬದಲಾಯಿಸಿದ್ದಾರೆ’ ಎಂದು ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.