ADVERTISEMENT

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ | ಕಣದಲ್ಲಿದ್ದಾರೆ 2 ಸಾವಿರಕ್ಕೂ ಅಧಿಕ ಪಕ್ಷೇತರರು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 23:55 IST
Last Updated 14 ನವೆಂಬರ್ 2024, 23:55 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

(ಸಾಂದರ್ಭಿಕ ಚಿತ್ರ)

ಮಹಾರಾಷ್ಟ್ರದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 2,086 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದು ಸ್ಪರ್ಧೆಯು ಭಾರಿ ಜಿದ್ದಾಜಿದ್ದಿನಿಂದ ಕೂಡಿರಲಿದೆ ಎನ್ನಲಾಗುತ್ತಿದೆ. 1995ರಲ್ಲಿ ಮಹಾರಾಷ್ಟ್ರದ ಚುನಾವಣಾ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಸಂಖ್ಯೆಯಲ್ಲಿ (3,196) ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇವರಲ್ಲಿ 45 ಅಭ್ಯರ್ಥಿಗಳು ಗೆಲುವನ್ನೂ ಸಾಧಿಸಿದ್ದರು. ಆಗಿನ ಶಿವಸೇನಾ–ಬಿಜೆಪಿ ಮೈತ್ರಿ ಸರ್ಕಾರಕ್ಕೆ ಈ ಎಲ್ಲ ಪಕ್ಷೇತರ ಶಾಸಕರು ಬೆಂಬಲ ನೀಡಿದ್ದರು.

ADVERTISEMENT

‘ಬಂಡಾಯ’ದ ಬಿಸಿ

ಚುನಾವಣೆಯಲ್ಲಿ ವಿವಿಧ ಪ್ರಮುಖ ಪಕ್ಷಗಳ ಒಟ್ಟು 571 ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇದು ಪ್ರಮುಖ ರಾಜಕೀಯ ಪಕ್ಷಗಳಿಗೆ ಹೆಚ್ಚು ತಲೆನೋವಾಗಿ ‍ಪರಿಣಮಿಸಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಬಂಡಾಯವೆದ್ದ ಅಭ್ಯರ್ಥಿಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ‘ಮಹಾಯುತಿ’ ಹಾಗೂ ‘ಮಹಾ ವಿಕಾಸ ಆಘಾಡಿ’ ಮೈತ್ರಿಕೂಟಗಳ ಈ ಬಂಡಾಯ ಅಭ್ಯರ್ಥಿಗಳು ಆಯಾ ಕ್ಷೇತ್ರದಲ್ಲಿ ಬಹಳ ಶಕ್ತಿಯುತವಾಗಿಯೂ ಇದ್ದಾರೆ. ವಿವಿಧ ಸಣ್ಣ ಪಕ್ಷಗಳ ಅಭ್ಯರ್ಥಿಗಳು ಕೂಡ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ತೀವ್ರ ಪೈಪೋಟಿ ನೀಡಲಿದ್ದಾರೆ. ಬಂಡಾಯ ಅಭ್ಯರ್ಥಿಗಳಾಗಲಿ, ಸಣ್ಣ ಪಕ್ಷಗಳ ಅಭ್ಯರ್ಥಿಗಳಾಗಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸದಿದ್ದರೂ ಪ್ರಮುಖ ಪಕ್ಷಗಳ ಮತಗಳನ್ನು ವಿಭಜಿಸುವಲ್ಲಿ ಹೆಚ್ಚಿನ ಪಾತ್ರ ವಹಿಸುವ ಸಾಧ್ಯತೆ ಇದೆ.

ಮಾಯಾವತಿ ಅವರ ‘ಬಹುಜನ ಸಮಾಜ ಪಕ್ಷ’ ಅತಿ ಹೆಚ್ಚು ಅಭ್ಯರ್ಥಿಗಳನ್ನು (237) ಕಣಕ್ಕಿಳಿಸಿದೆ. ಪ್ರಕಾಶ್‌ ಅಂಬೇಡ್ಕರ್‌ ಅವರ ‘ವಂಚಿತ್‌ ಬಹುಜನ್‌ ಆಘಾಡಿ’ಯು (200) ನಂತರದ ಸ್ಥಾನದಲ್ಲಿದೆ. ರಾಜ್‌ ಠಾಕ್ರೆ ಅವರ ಎಂಎನ್‌ಎಸ್‌, 125 ಅಭ್ಯರ್ಥಿಗಳನ್ನು ಕಣಕ್ಕಿಳಿದೆ. ಛತ್ರಪತಿ ರಾಜಶ್ರಿ ಸಾಹು ಮಹಾರಾಜ್‌ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್‌ ವಂಶಸ್ಥ ಯುವರಾಜ್‌ ಸಾಂಬಾಜಿ ರಾಜೇ ಛತ್ರಪತಿ ಅವರ ‘ಮಹಾರಾಷ್ಟ್ರ ಸ್ವರಾಜ್ಯ ಪಕ್ಷ’ 125 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಪ್ರಮುಖ ಪಾತ್ರ

‘ಮತದಾನಕ್ಕೂ ಮೊದಲಿನ ಚುನಾವಣಾ ವಾತಾವರಣವನ್ನು ಗಮನಿಸಿದರೆ, ಪಕ್ಷೇತರರು ಹಾಗೂ ಸಣ್ಣ ಪಕ್ಷಗಳ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬುದು ತೋರುತ್ತಿದೆ. ಜೊತೆಗೆ, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಂಡಾಯ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ’ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಆಧಾರ: ಪಿಟಿಐ, ಚುನಾವಣಾ ಆಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.