ADVERTISEMENT

ಮಹಾರಾಷ್ಟ್ರ ಫಲಿತಾಂಶ ವಿಶ್ಲೇಷಣೆ | ಬದಲಾದ ರಾಜಕೀಯ ಸಮೀಕರಣ

ಮೃತ್ಯುಂಜಯ ಬೋಸ್
Published 25 ಅಕ್ಟೋಬರ್ 2019, 2:22 IST
Last Updated 25 ಅಕ್ಟೋಬರ್ 2019, 2:22 IST
   

ಮುಂಬೈ: ಬಿಜೆಪಿ–ಶಿವಸೇನಾ ನೇತೃತ್ವದ ಮೈತ್ರಿಕೂಟ ‘ಮಹಾಯುತಿ’ ಸತತ ಎರಡನೇ ಅವಧಿಗೆ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಆದರೆ, ಈ ಬಾರಿ ಈ ಮೈತ್ರಿಕೂಟಕ್ಕೆ ಇರುವುದು ಸರಳ ಬಹುಮತ ಮಾತ್ರ. ಜತೆಗೆ ಮೈತ್ರಿಕೂಟದ ಹಿರಿಯ ಪಾಲುದಾರ ಬಿಜೆಪಿಯ ಸ್ಥಾನ ಸಂಖ್ಯೆ ಇಳಿಕೆಯಾಗಿದೆ. ಹಾಗಾಗಿ, ರಾಜ್ಯದ ಅಧಿಕಾರ ರಾಜಕಾರಣದ ಸಮೀಕರಣ ದೊಡ್ಡ ಮಟ್ಟದಲ್ಲಿ ಬದಲಾವಣೆ ಕಾಣಲಿದೆ.

‘ಈ ಬಾರಿ 220ರ ಮೇಲೆ’ ಎಂಬುದು ಬಿಜೆಪಿ ನೇತೃತ್ವದ ಮೈತ್ರಿಕೂಟದ ಘೋಷವಾಕ್ಯವಾಗಿತ್ತು. ಆದರೆ, ಇದು ಕಾರ್ಯರೂಪಕ್ಕೆ ಬಂದಿಲ್ಲ. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಬೇಕಿರುವುದು 145 ಸ್ಥಾನಗಳು. ಅಷ್ಟು ಸ್ಥಾನಗಳು ಈ ಮೈತ್ರಿಕೂಟಕ್ಕೆ ಸಿಕ್ಕಿವೆ. ಆದರೆ, ಈ ಬಾರಿಯ ವಿಧಾನಸಭೆಯ ಚಿತ್ರಣ ಬಹಳ ಬದಲಾಗಿದೆ. ಶರದ್‌ ಪವಾರ್‌ ಅವರ ಎನ್‌ಸಿಪಿ ಮತ್ತು ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟದ ಸ್ಥಾನಬಲ ಹೆಚ್ಚಾಗಿದೆ. ಅದಕ್ಕಿಂತಲೂ ಮುಖ್ಯವಾಗಿ, ಈ ಮೈತ್ರಿಕೂಟದ ಮನೋಬಲ ಇನ್ನೂ ಹೆಚ್ಚಾಗಿದೆ.

ಮಹಾರಾಷ್ಟ್ರದ ಎರಡೂ ಮೈತ್ರಿಕೂಟಗಳಿಗೆ ಮೂರು ದಶಕಗಳ ಇತಿಹಾಸ ಇದೆ. ಈ ಬಾರಿ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎರಡೂ ಮೈತ್ರಿಕೂಟಗಳ ಬಂಡಾಯ ಅಭ್ಯರ್ಥಿಗಳು ಫಲಿತಾಂಶದ ಮೇಲೆ ಭಾರಿ ಪ್ರಭಾವ ಬೀರಿದ್ದಾರೆ. ಈ ಬಾರಿ 28 ಸಣ್ಣ ಪಕ್ಷಗಳು ಕಣದಲ್ಲಿದ್ದವು. ಹಲವು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ದಡ ಸೇರಿದ್ದಾರೆ. ಇಂತಹವರ ಸಂಖ್ಯೆ ಸುಮಾರು 15ರಷ್ಟಿದೆ. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಈ ಎಲ್ಲರ ಜತೆಗೂ ಸಂಪರ್ಕದಲ್ಲಿದ್ದಾರೆ ಎಂಬ ವರದಿಗಳಿವೆ. ಹಾಗಾಗಿ, ರಾಜ್ಯದಲ್ಲಿ ಮತ್ತೊಂದು ಸುತ್ತಿನ ‘ಆಪರೇಷನ್‌ ಕಮಲ’ ನಡೆಯುವ ಸಾಧ್ಯತೆ ಇದೆ.

ADVERTISEMENT

ಪ್ರಕಾಶ್‌ ಅಂಬೇಡ್ಕರ್‌ ಅವರ ಬಹುಜನ ವಂಚಿತ್‌ ಅಘಾಡಿಯು ಲೋಕಸಭಾ ಚುನಾವಣೆಯಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಮತಗಳಿಗೆ ಕನ್ನ ಹಾಕಿ ಬಿಜೆಪಿಗೆ ನೆರವಾಗಿತ್ತು. ಆದರೆ, ಈ ಬಾರಿ ಪ್ರಕಾಶ್‌ ಅವರ ಜಾದೂ ನಡೆದಿಲ್ಲ. ರಾಜ್‌ ಠಾಕ್ರೆ ಅವರ ಎಂಎನ್‌ಎಸ್‌ನ ಒಬ್ಬ ಅಭ್ಯರ್ಥಿ ಗೆದ್ದರೆ, ಅಸಾದುದ್ದೀನ್‌ ಒವೈಸಿ ಅವರ ಪಕ್ಷದ ಇಬ್ಬರು ಗೆದ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.