ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಶರದ್ ಪವಾರ್ ಅವರ ಚಿತ್ರಗಳು, ವಿಡಿಯೊಗಳನ್ನು ಬಳಸಿಕೊಳ್ಳದಂತೆ ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ (ಎನ್‌ಸಿಪಿ) ಸುಪ್ರೀಂ ಕೋರ್ಟ್ ಬುಧವಾರ ಮೌಖಿಕ ನಿರ್ದೇಶನ ನೀಡಿದೆ. ಹಾಗೆಯೇ, ನಿಮ್ಮ ಕಾಲಿನ ಮೇಲೆ ನಿಲ್ಲಿ ಎಂದು ಚಾಟಿ ಬೀಸಿದೆ.
ಅಜಿತ್ ಅವರು ಎನ್‌ಸಿಪಿ ಮುಖ್ಯಸ್ಥ ಶರದ್ ನಾಯಕತ್ವದ ವಿರುದ್ಧ 2023ರ ಜುಲೈನಲ್ಲಿ ಬಂಡಾಯ ಸಾರಿದ್ದರು. ಬೆಂಬಲಿಗ ಶಾಸಕರೊಂದಿಗೆ ಎನ್‌ಸಿಪಿಯಿಂದ ಹೊರಬಂದ ಅಜಿತ್ ಬಣವೇ ನಿಜವಾದ 'ಎನ್‌ಸಿಪಿ' ಎಂದು ಚುನಾವಣಾ ಆಯೋಗ ಇದೇ ವರ್ಷ ಫೆಬ್ರುವರಿಯಲ್ಲಿ ಘೋಷಿಸಿದೆ. ಪಕ್ಷದ ಚಿಹ್ನೆಯಾಗಿರುವ ಗಡಿಯಾರವನ್ನು ಬಳಸಿಕೊಳ್ಳಲು ಸುಪ್ರೀಂ ಕೋರ್ಟ್ ಅಜಿತ್ ಬಣಕ್ಕೆ ಅನುಮತಿಸಿದೆ.
ಅಜಿತ್ ಬಣವು ಗಡಿಯಾರದ ಚಿಹ್ನೆಯನ್ನು ಬಳಸದಂತೆ ಆದೇಶಿಸಲು ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಕೋರಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಶರದ್ ಬಣದ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಅಜಿತ್ ಬಣದ ಎನ್‌ಸಿಪಿ ಅಭ್ಯರ್ಥಿಯೊಬ್ಬರು ಚುನಾವಣಾ ಪ್ರಚಾರ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಪೋಸ್ಟರ್‌ನಲ್ಲಿ ಶರದ್ ಪವಾರ್ ಅವರ ಚಿತ್ರವನ್ನು ಪೋಸ್ಟರ್‌ನಲ್ಲಿ ಹಂಚಿಕೊಂಡಿದ್ದರು. ಪ್ರಶ್ನಿಸಿದ ಬಳಿಕ, ಪೋಸ್ಟ್ ಅಳಿಸಲಾಗಿದೆ ಎಂದು ಕೋರ್ಟ್‌ಗೆ ತಿಳಿಸಿದರು.
ವಾದ ಆಲಿಸಿದ ನ್ಯಾ. ಸೂರ್ಯ ಕಾಂತ್ ಅವರು, 'ವಿಡಿಯೊ/ಚಿತ್ರ ಹಳೆಯದ್ದಾಗಿರಲಿ ಅಥವಾ ಅಲ್ಲದಿರಲಿ, ಮಿ.ಪವಾರ್ ನೀವು ಶರದ್ ಪವಾರ್ ಅವರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದ್ದೀರಿ ಮತ್ತು ಅವರ ವಿರುದ್ಧ ಹೋರಾಟ ನಡೆಸುತ್ತಿದ್ದೀರಿ. ಅಂದಮೇಲೆ, ನೀವು ನಿಮ್ಮ ಕಾಲುಗಳ ಮೇಲೆಯೇ ನಿಲ್ಲುವ ಪ್ರಯತ್ನ ಮಾಡಬೇಕು' ಎಂದು ಅಜಿತ್ ಬಣಕ್ಕೆ ಹೇಳಿದ್ದಾರೆ.
'ಕದನ ಕಣದ ಬಗ್ಗೆ ಗಮನಹರಿಸಿ. ಜನರು ಎಲ್ಲಕ್ಕೂ ಉತ್ತರಿಸುತ್ತಾರೆ. ಅವರು ತುಂಬಾ ಪ್ರಬುದ್ಧರು. ಎಲ್ಲಿ, ಹೇಗೆ ಮತ ಚಲಾಯಿಸಬೇಕು ಎಂಬುದು ಅವರಿಗೆ ಗೊತ್ತಿದೆ. ಅವರ, ಬುದ್ಧಿವಂತಿಕೆ ಬಗ್ಗೆ ನಮಗೆ ಅನುಮಾನಗಳಿಲ್ಲ. ಅವರಿಗೆ ಶರದ್ ಪವಾರ್ ಯಾರು? ಅಜಿತ್ ಪವಾರ್ ಯಾರು? ಎಂಬುದು ಗೊತ್ತಿದೆ. ಈ ವಿಡಿಯೊಗಳು ಮತದಾರರ ಮೇಲೆ ಪರಿಣಾಮ ಬೀರಲೂಬಹುದು ಅಥವಾ ಬೀರದಿರಲೂಬಹುದು. ಆದರೆ, ಕೋರ್ಟ್‌ನ ಆದೇಶ ಇರುವಾಗ, ಅದನ್ನು ಗೌರವಿಸಬೇಕಿದೆ' ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.