ADVERTISEMENT

ಸಮಾನ ಅಧಿಕಾರ ಹಂಚಿಕೆಗೆ ಶಿವಸೇನಾ ಬಿಗಿಪಟ್ಟು

ಲಿಖಿತ ಭರವಸೆಯ ನಂತರವೇ ಪ್ರಮಾಣವಚನ * ಉದ್ಧವ್‌ ಠಾಕ್ರೆಯನ್ನು ಭೇಟಿಯಾದ ಶಾಸಕರು l ದೀಪಾವಳಿ ಬಳಿಕ ಸರ್ಕಾರ ರಚನೆ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 19:45 IST
Last Updated 26 ಅಕ್ಟೋಬರ್ 2019, 19:45 IST
   

ಮುಂಬೈ: ಎನ್‌ಸಿಪಿ- ಕಾಂಗ್ರೆಸ್‌ ಮೈತ್ರಿಯಿಂದ ಬೆಂಬಲ ಲಭಿಸುವ ಸೂಚನೆ ಪಡೆದಿರುವ ಶಿವಸೇನಾ, ಅಧಿಕಾರ ಹಂಚಿಕೆಯ ವಿಚಾರದಲ್ಲಿ ತನ್ನ ಪಟ್ಟನ್ನು ಇನ್ನಷ್ಟು ಬಿಗಿಗೊಳಿಸಿದೆ. ‘ಸರ್ಕಾರ ರಚನೆಗೂ ಮುನ್ನ ಅಧಿಕಾರದ ಸಮಾನ ಹಂಚಿಕೆಯ ಬಗ್ಗೆ ಲಿಖಿತ ಭರವಸೆ ನೀಡಬೇಕು’ ಎಂದು ಬಿಜೆಪಿಯನ್ನು ಒತ್ತಾಯಿಸಿದೆ.

ಪಕ್ಷದ ಮುಖಂಡ ಉದ್ಧವ್‌ ಠಾಕ್ರೆ ಅವರನ್ನು ಶನಿವಾರ ಅವರ ಮನೆ ‘ಮಾತೋಶ್ರೀ’ಯಲ್ಲಿ ಭೇಟಿಮಾಡಿದ ಪಕ್ಷದ 56 ಮಂದಿ ಶಾಸಕರು, ‘ರಾಜ್ಯದಲ್ಲಿ ಸರ್ಕಾರ ರಚನೆಗೂ ಮುನ್ನ, ಅಧಿಕಾರದ ಸಮಾನ ಹಂಚಿಕೆಯ ಬಗ್ಗೆ ಬಿಜೆಪಿಯಿಂದ ಲಿಖಿತ ಭರವಸೆಯನ್ನು ಪಡೆಯಬೇಕು’ ಎಂದು ಒತ್ತಾಯಿಸಿದರು.

‘50:50ರ ಅನುಪಾತದಲ್ಲಿ ಅಧಿ ಕಾರ ಹಂಚಿಕೆಯಾಗಬೇಕು ಮತ್ತು ಈ ಬಗ್ಗೆ ಸ್ಪಷ್ಟವಾದ ಒಪ್ಪಂದವನ್ನು ಮೊದಲೇ ಮಾಡಿಕೊಳ್ಳಬೇಕು’ ಎಂದು ಶಿವಸೇನಾ ಶಾಸಕರು ಒಕ್ಕೊರಲಿನಿಂದ ಒತ್ತಾಯಿಸಿದರು.

ADVERTISEMENT

ಇನ್ನೂ ಕೆಲವರು, ಠಾಕ್ರೆ ಕುಟುಂಬದಿಂದ ಮೊದಲಬಾರಿಗೆ ವಿಧಾನಸಭೆಯನ್ನು ಪ್ರವೇಶಿಸುತ್ತಿರುವ ಆದಿತ್ಯ ಠಾಕ್ರೆ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದೂ ಒತ್ತಾಯಿಸಿದರು. ಈ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳುವ ಅಧಿಕಾರವನ್ನು ಶಾಸಕರು ಉದ್ಧವ್‌ ಠಾಕ್ರೆ ಅವರಿಗೆ ನೀಡಿದರು.

ಬಾಳಾಸಾಹೇಬ ಠಾಕ್ರೆ ಅವರು 53 ವರ್ಷಗಳ ಹಿಂದೆ ಶಿವಸೇನಾವನ್ನು ಸ್ಥಾಪಿಸಿದ್ದರೂ ಅವರ ಕುಟುಂಬದವರು ಯಾರೂ ಈವರೆಗೆ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಇದೇ ಮೊದಲ ಬಾರಿಗೆ ಠಾಕ್ರೆ ಅವರ ಮೊಮ್ಮಗ ಆದಿತ್ಯ ಠಾಕ್ರೆ ವರ್ಲಿ ಕ್ಷೇತ್ರದಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದಾರೆ.

‘ನಾನು ಹಿಂದುತ್ವ ಸಿದ್ಧಾಂತಕ್ಕೆ ಬದ್ಧನಾಗಿರುವುದರಿಂದ, ಸರ್ಕಾರ ರಚನೆಗಾಗಿ ಬೇರೆ ಸಾಧ್ಯತೆಗಳ ಬಗ್ಗೆ ಚಿಂತಿಸುವುದಿಲ್ಲ’ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ತಮ್ಮನ್ನು ಭೇಟಿ ಮಾಡಿದ ಶಾಸಕರಿಗೆ ಹೇಳಿದ್ದಾರೆ.

ಉದ್ಧವ್‌ ಭೇಟಿಯ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶಿವಸೇನಾ ಶಾಸಕ ಪ್ರತಾಪ್‌ ಸರನಾಯಕ್‌, ‘ತಲಾ ಎರಡೂವರೆ ವರ್ಷ ಅವಧಿಗೆ ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳುವುದೂ ಸೇರಿದಂತೆ, ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಬಿಜೆಪಿಯವರು ಸಹಿ ಮಾಡದ ಹೊರತು ಸರ್ಕಾರ ರಚನೆಯ ಪ್ರಕ್ರಿಯೆ ಆರಂಭಿಸಬಾರದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಚುನಾವಣೆಗೂ ಮುನ್ನವೇ ಅಮಿತ್‌ ಶಾ ಹಾಗೂ ಉದ್ಧವ್‌ ಠಾಕ್ರೆ ಮಧ್ಯೆ ಈ ಒಪ್ಪಂದ ಏರ್ಪಟ್ಟಿತ್ತು. ಈಗ ಬಿಜೆಪಿಯಿಂದ ಲಿಖಿತ ಭರವಸೆಯನ್ನು ನಿರೀಕ್ಷಿಸುತ್ತೇವೆ’ ಎಂದರು.

ಇತ್ತೀಚೆಗಷ್ಟೇ ಎನ್‌ಸಿಪಿ ತೊರೆದು ಶಿವಸೇನಾ ಸೇರಿದ್ದ ಭಾಸ್ಕರ್‌ ಜಾಧವ್‌ ಅವರೂ, ‘ಮುಖ್ಯಮಂತ್ರಿ ಸ್ಥಾನವನ್ನು ಸಹ ಎರಡೂ ಪಕ್ಷಗಳು ತಲಾ ಎರಡೂವರೆ ವರ್ಷ ಅವಧಿಗೆ ಹಂಚಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ದೀಪಾವಳಿಯ ನಂತರವೇ ಸರ್ಕಾರ ರಚನೆಯ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಲು ಬಿಜೆಪಿ ಮತ್ತು ಶಿವಸೇನಾ ನಾಯಕರು ತೀರ್ಮಾನಿಸಿದ್ದಾರೆ. 288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಗೆ ಬಿಜೆಪಿಯ 105 ಮಂದಿ ಹಾಗೂ ಶಿವಸೇನಾದ 56 ಮಂದಿ ಆಯ್ಕೆಯಾಗಿದ್ದಾರೆ. ಇದಲ್ಲದೆ ತನಗೆ ಪಕ್ಷೇತರರು ಮತ್ತು ಸಣ್ಣ ಪಕ್ಷಗಳ ಶಾಸಕರು ಸೇರಿ ಇತರ 15 ಮಂದಿಯ ಬೆಂಬಲ ಇದೆ ಎಂದು ಫಡಣವೀಸ್‌ ಹೇಳಿದ್ದಾರೆ.

ಬಿಜೆಪಿ ಸಭೆ ಬುಧವಾರ
‘ಮಹಾರಾಷ್ಟ್ರದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯು ಬುಧವಾರ (ಅ. 30) ನಡೆಯಲಿದ್ದು, ಅಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುವುದು’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ ಪಾಟೀಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮೋದಿ ಹಾಗೂ ಅಮಿತ್‌ ಶಾ ಅವರು ‘ದೇವೇಂದ್ರ ಫಡಣವೀಸ್‌ ಅವರೇ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ಹಲವು ಬಾರಿ ಘೋಷಿಸಿದ್ದರು. ಆದ್ದರಿಂದ ಅವರೇ ಶಾಸಕಾಂಗ ಪಕ್ಷದ ನಾಯಕನಾಗಿ ಮರು ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.

ವಿರೋಧಪಕ್ಷದ ನಾಯಕ ಸ್ಥಾನಕ್ಕೆ ಎನ್‌ಸಿಪಿ ಬೇಡಿಕೆ
ಮಹಾರಾಷ್ಟ್ರ ವಿಧಾಸನಭೆಯ ಪ್ರತಿಪಕ್ಷ ನಾಯಕನ ಹುದ್ದೆಗೆ ಬೇಡಿಕೆ ಇಡಲು ಎನ್‌ಸಿಪಿ ನಿರ್ಧರಿಸಿದೆ. ದೀಪಾವಳಿ ಹಬ್ಬದ ಬಳಿಕ ಕಾಂಗ್ರೆಸ್– ಎನ್‌ಸಿಪಿ ನಾಯಕರು ಸಭೆ ಸೇರಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಗೆ ಹೊಸದಾಗಿ ಆಯ್ಕೆಯಾದವರಲ್ಲಿ ಎನ್‌ಸಿಪಿಯ 54 ಮಂದಿ ಹಾಗೂ ಕಾಂಗ್ರೆಸ್‌ನ 44 ಮಂದಿ ಇದ್ದಾರೆ. ಈ ಪಕ್ಷಗಳು ರಾಜ್ಯದ ಇತರ ಸಣ್ಣ ಪಕ್ಷಗಳ ಜೊತೆಗೂ ಮಾತುಕತೆ ನಡೆಸಲಿವೆ ಎನ್ನಲಾಗಿದೆ.

‘ಸರ್ಕಾರ ರಚಿಸುವ ಸಲುವಾಗಿ ನಾವು ಶಿವಸೇನಾವನ್ನು ಸಂಪರ್ಕಿಸುವುದಿಲ್ಲ. ರಾಜ್ಯದ ಜನರು ವಿರೋಧಪಕ್ಷದ ಸ್ಥಾನದಲ್ಲಿ ಕೂರುವಂತೆ ನಮಗೆ ಸೂಚಿಸಿದ್ದಾರೆ. ನಾವು ಆ ಕೆಲಸವನ್ನೇ ಮಾಡುತ್ತೇವೆ’ ಎಂದು ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಸ್ಪಷ್ಟಪಡಿಸಿದ್ದಾರೆ.

‘ಪರ್ಯಾಯದ ಬಗ್ಗೆ ಚಿಂತಿಸಿ’: ‘ಸರ್ಕಾರ ರಚನೆಗೆ ಇರುವ ಪರ್ಯಾಯ ಸಾಧ್ಯತೆಗಳ ಬಗ್ಗೆಯೂ ಶಿವಸೇನಾ ಚಿಂತನೆ ನಡೆಸಬೇಕು’ ಎಂದು ಮಹಾರಾಷ್ಟ್ರದ ಕಾಂಗ್ರೆಸ್‌ ಮುಖಂಡ ವಿಜಯ್‌ ವಡ್ಡಟ್ಟಿವರ್‌ ಹೇಳಿದ್ದಾರೆ.

‘ಈ ಬಾರಿಯೂ ವಿರೋಧಪಕ್ಷದಲ್ಲಿ ಕೂರುವಂತೆ ಜನರು ನಮಗೆ ಸೂಚಿಸಿದ್ದರೂ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಇತರ ಪಕ್ಷಗಳ ಜೊತೆಗೆ ಕಾಂಗ್ರೆಸ್‌ ಕೈಜೋಡಿಸಬೇಕು. ಜನರ ತೀರ್ಪು ಬಿಜೆಪಿಯ ವಿರುದ್ಧವಾಗಿರುವುದರಿಂದ, ಪರ್ಯಾಯ ವ್ಯವಸ್ಥೆ ರೂಪಿಸಲು ಶಿವಸೇನಾ ಮುಂದೆ ಬರಬೇಕು’ ಎಂದಿದ್ದಾರೆ.

*
‘ನಾನು ಹಿಂದುತ್ವ ಸಿದ್ಧಾಂತಕ್ಕೆ ಬದ್ಧನಾಗಿರುವುದರಿಂದ, ಸರ್ಕಾರ ರಚನೆಗಾಗಿ ಬೇರೆ ಸಾಧ್ಯತೆಗಳ ಬಗ್ಗೆ ಚಿಂತಿಸುವುದಿಲ್ಲ’
-ಉದ್ಧವ್‌ ಠಾಕ್ರೆ, ಶಿವಸೇನಾ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.