ಮುಂಬೈ: ಮಹಾರಾಷ್ಟ್ರ ಬಿಜೆಪಿ ಮತ್ತು ಶಿವಸೇನಾ ನಡುವಣ ವಾಕ್ಸಮರ ಶುಕ್ರವಾರ ತಾರಕಕ್ಕೆ ಏರಿದೆ. ಎರಡೂ ಪಕ್ಷಗಳ ನಡುವಣ ಮೈತ್ರಿ ಅಂತ್ಯವಾಗುವ ಸಾಧ್ಯತೆ ಇದೆ.
ಶುಕ್ರವಾರ ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಂತರ ಮಾಧ್ಯಮಗೋಷ್ಠಿ ನಡೆಸಿ, ಶಿವಸೇನಾ ವಿರುದ್ಧ ಹರಿಹಾಯ್ದಿದ್ದಾರೆ. ಶಿವಸೇನಾ ಸಹ ಬಿಜೆಪಿಗೆ ತಿರುಗೇಟು ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧ ಪಕ್ಷಗಳು ಟೀಕಿಸುವುದಕ್ಕಿಂತ, ಶಿವಸೇನಾ ಹೆಚ್ಚು ಟೀಕಿಸಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಸೇನಾ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಇಂತಹವರ ಜತೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಫಡಣವೀಸ್ ಹರಿಹಾಯ್ದಿದ್ದಾರೆ.
‘ಶಿವಸೇನಾ ಜತೆ 50:50 ಅನುಪಾತದಲ್ಲಿ ಅಧಿಕಾರ ಹಂಚಿಕೊಳ್ಳುವ ಸಂಬಂಧ ಯಾವ ಒಪ್ಪಂದವೂ ಆಗಿರಲಿಲ್ಲ. ನಾವು ಮೈತ್ರಿಕೂಟ ರಚಿಸಿಕೊಂಡು ಚುನಾವಣೆ ಗೆದ್ದಿದ್ದೇವೆ. ಶಿವಸೇನಾದವರು ನಮ್ಮೊಂದಿಗೆ ಮಾತುಕತೆ ನಡೆಸುವುದರ ಬದಲು, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಬಾಗಿಲು ಬಡಿದರು. ಇದರಿಂದ ನಮಗೆ ಆಘಾತವಾಯಿತು’ ಎಂದು ಫಡಣವೀಸ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಬೇಕು, ಇಲ್ಲವೇ ರಾಷ್ಟ್ರಪತಿ ಆಳ್ವಿಕೆ ಬರಬೇಕು. ಆದರೆ, ಬಿಜೆಪಿಯು ನನ್ನ ನೇತೃತ್ವದಲ್ಲಿ ಮತ್ತೆ ಸರ್ಕಾರ ರಚಿಸಲಿದೆ’ ಎಂದು ಅವರು ಘೋಷಿಸಿದ್ದಾರೆ.
ಶಿವಸೇನಾ ತಿರುಗೇಟು:ಶುಕ್ರವಾರ ಸಂಜೆ ಮಾಧ್ಯಗೋಷ್ಠಿ ನಡೆಸಿದ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
‘ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಬಿಂಬಿಸಲು ಬಿಜೆಪಿ ಪ್ರಯತ್ನಿಸಿತು. ಮುಖ್ಯಮಂತ್ರಿ ಹುದ್ದೆ ಹಂಚಿಕೊಳ್ಳುವ ಮಾತನ್ನು ಅಮಿತ್ ಶಾ ಆಡಿದ್ದರು. ಈಗ ಅಂತಹ ಮಾತೇ ಆಡಿಲ್ಲ ಎಂದು ಫಡಣವೀಸ್ ಹೇಳುತ್ತಿದ್ದಾರೆ.ಕೊಟ್ಟ ಮಾತು ತಪ್ಪುವ ಇಂತಹ ಸುಳ್ಳುಗಾರರ ಜತೆ ಸರ್ಕಾರ ರಚಿಸುವ ಅಗತ್ಯವಿಲ್ಲ’ ಎಂದು ಅವರು ತಿಳಿಸಿದ್ದಾರೆ.
‘ನಾವು ಎನ್‌ಡಿಎ ಸರ್ಕಾರದ ನೀತಿಗಳನ್ನು ಟೀಕಿಸಿದ್ದೇವೆ ಅಷ್ಟೆ, ಮೋದಿ ಅವರನ್ನಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಸರ್ಕಾರ ರಚನೆಗೆ ನಮ್ಮ ಎದುರು ಹಲವು ಆಯ್ಕೆಗಳಿವೆ. ನಾವು ಬಯಸಿದರೆ ನಮ್ಮ ಪಕ್ಷದವರೇ ಮುಖ್ಯಮಂತ್ರಿ ಆಗುತ್ತಾರೆ’ ಎಂದು ಶಿವಸೇನಾ ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ.
ಪ್ರಸಕ್ತ ವಿಧಾನಸಭೆ ಅವಧಿ ಶನಿವಾರ ಮುಗಿಯುತ್ತಿದೆ. ಬಿಜೆಪಿಯಾಗಲೀ, ಶಿವಸೇನಾವಾಗಲೀ ಸರ್ಕಾರ ರಚಿಸುವ ಸಂಬಂಧ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿಲ್ಲ. ಬಿಜೆಪಿ–ಶಿವಸೇನಾ ಮೈತ್ರಿಯೇ ಸರ್ಕಾರ ರಚಿಸಬೇಕು ಎಂದು ಎನ್‌ಸಿಪಿ ಹೇಳಿದೆ.
ಶಿವಸೇನಾ ಜತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಈ ಮೂಲಕ ಎನ್‌ಸಿಪಿ ತಳ್ಳಿ ಹಾಕಿದೆ.ಹೀಗಾಗಿ ನೂತನ ಸರ್ಕಾರ ರಚನೆ ಅನಿಶ್ಚತೆ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.