ಪುಣೆ: ‘ಮಹಾರಾಷ್ಟ್ರದಲ್ಲಿ 2019ರಲ್ಲಿ ನಡೆದ ಚುನಾವಣೆ ಬಳಿಕ ಸರ್ಕಾರ ರಚಿಸುವ ಸಲುವಾಗಿ ಬಿಜೆಪಿ ಹಾಗೂ ಎನ್‌ಸಿಪಿ ನಡುವೆ ನಡೆದ ಸಭೆಯಲ್ಲಿ ಉದ್ಯಮಿ ಗೌತಮ್ ಅದಾನಿ ಭಾಗಿಯಾಗಿದ್ದರು’ ಎಂದು ಎನ್‌ಸಿಪಿ (ಅಜಿತ್ ಬಣ) ಮುಖ್ಯಸ್ಥ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೀಡಿರುವ ಹೇಳಿಕೆಯು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಮಹಾರಾಷ್ಟ್ರ ವಿಧಾನಸಭೆಗೆ ಇದೇ 20ರಂದು ಮತದಾನ ನಡೆಯಲಿದೆ. ಈ ಸಂದರ್ಭದಲ್ಲಿ ಖಾಸಗಿ ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಜಿತ್ ಪವಾರ್ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ. ಈ ಮಧ್ಯೆ ಎರಡು ರಾಜಕೀಯ ಪಕ್ಷಗಳ ನಡುವೆ ನಡೆದ ಸಭೆಯಲ್ಲಿ ಉದ್ಯಮಿ ಅದಾನಿ ಅವರಿಗೆ ಏನು ಕೆಲಸ ಎಂದು ವಿರೋಧ ಪಕ್ಷಗಳು ಪ್ರಶ್ನಿಸಿವೆ.
2019ರ ಚುನಾವಣೆ ಬಳಿಕ ಉದ್ಧವ್ ಠಾಕ್ರೆ ಅವರ ಶಿವಸೇನಾವು ಬಿಜೆಪಿಯೊಂದಿಗಿನ ತನ್ನ 30 ವರ್ಷಗಳ ಮೈತ್ರಿ ಸಂಬಂಧವನ್ನು ಕಡಿದುಕೊಂಡಿತ್ತು ಮತ್ತು ಸರ್ಕಾರ ರಚಿಸುವ ಸಲುವಾಗಿ ಕಾಂಗ್ರೆಸ್ ಹಾಗೂ ಎನ್‌ಸಿಪಿಯೊಂದಿಗೆ ಮಾತುಕತೆಯಲ್ಲಿ ತೊಡಗಿತ್ತು. ಈ ಹಂತದಲ್ಲಿಯೇ ಬಿಜೆಪಿ ಹಾಗೂ ಎನ್‌ಸಿಪಿ ನಡುವೆ ಸಭೆ ನಡೆದಿತ್ತು.
ಅಜಿತ್ ಹೇಳಿದ್ದೇನು?: ‘ಐದು ವರ್ಷಗಳ ಹಿಂದೆ ಏನಾಗಿತ್ತು ಎಂದು ಎಲ್ಲರಿಗೂ ತಿಳಿದಿದೆ. ಸಭೆಯು ಅದಾನಿ ಅವರ ದೆಹಲಿ ನಿವಾಸದಲ್ಲಿ ನಡೆದಿತ್ತು. ಆ ಸಭೆಯಲ್ಲಿ ಅಮಿತ್ ಶಾ, ಗೌತಮ್ ಅದಾನಿ, ಪ್ರಫುಲ್ ಪಟೇಲ್, ದೇವೇಂದ್ರ ಫಡಣವೀಸ್, ನಾನು ಹಾಗೂ ಪವಾರ್ ಸಾಹೇಬರು (ಶರದ್ ಪವಾರ್) ಇದ್ದೇವು’ ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಸಭೆ ನಡೆದ ಬಳಿಕವೂ ಶರದ್ ಪವಾರ್ ಅವರು ಏಕೆ ಎನ್‌ಡಿಎ ಮೈತ್ರಿಕೂಟ ಸೇರಿಕೊಳ್ಳಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅಜಿತ್, ‘ಪವಾರ್ ಸಾಹೇಬರ ತಲೆಯಲ್ಲಿ ಏನು ಓಡುತ್ತದೆ ಎಂದು ಚಿಕ್ಕಮ್ಮನಿಗೂ (ಪ್ರತಿಭಾ ಪವಾರ್) ತಂಗಿಗೂ (ಸುಪ್ರಿಯಾ ಸುಳೆ) ಗೊತ್ತಿರುವುದಿಲ್ಲ’ ಎಂದರು.
ರಾಜಕಾರಣದಲ್ಲಿ ನಿಮಗೆ ಸೈದ್ಧಾಂತಿಕ ನಿಲುವು ಇಲ್ಲವೇ ಎಂದು ಪ್ರಶ್ನಿಸಿದಾಗ, ‘ಮಹಾರಾಷ್ಟ್ರದಲ್ಲಿ ಸಿದ್ಧಾಂತದ ಬಗ್ಗೆ ಕೇಳಲೇಬೇಡಿ. ರಾಜ್ಯದ ಇಡೀಯ ರಾಜಕಾರಣವು ಬದಲಾಗಿದೆ. ಇಲ್ಲಿ ಎಲ್ಲರಿಗೂ ಅಧಿಕಾರ ಬೇಕು. ಅಧಿಕಾರಕ್ಕಾಗಿ ಸಿದ್ಧಾಂತವನ್ನು ಮೂಲೆಗೆ ಬಿಸಾಡಲಾಗಿದೆ’ ಎಂದರು.
ಅಜಿತ್ ಅವರ ಹೇಳಿಕೆ ಕುರಿತು ಬಿಜೆಪಿಯಾಗಲಿ, ಎನ್‌ಸಿಪಿ ಪಕ್ಷವಾಗಲಿ (ಶರದ್ ಬಣ) ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಹೇಗೆ ರಚಿಸಬೇಕು ಎಂಬ ಕುರಿತು ನಡೆದ ಸಭೆಯಲ್ಲಿ ಅದಾನಿ ಅವರೂ ಇದ್ದರು ಎಂಬುದಾಗಿ ಸಂಪುಟದ ಹಿರಿಯ ಸಚಿವರೊಬ್ಬರ ಸಂದರ್ಶನದ ಮೂಲಕ ತಿಳಿದುಬಂದಿದೆ. ಇದು ಕೆಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ: 1. ಅದಾನಿ ಅವರು ಬಿಜೆಪಿಯ ಅಧಿಕೃತ ಸಂಧಾನಕಾರರೇ? 2. ಮೈತ್ರಿಕೂಟ ರಚಿಸುವ ಜವಾಬ್ದಾರಿಯನ್ನು ಅದಾನಿ ಅವರಿಗೆ ನೀಡಲಾಗಿತ್ತೇ? 3. ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಉದ್ಯಮಿಯೊಬ್ಬರು ಏಕೆ ಇಷ್ಟೊಂದು ಆಸಕ್ತಿವಹಿಸಿ ಕೆಲಸ ಮಾಡಿದರು?–ಪ್ರಿಯಾಂಕಾ ಚತುರ್ವೇದಿ, ಶಿವಸೇನಾದ (ಉದ್ಧವ್ ಬಣ) ರಾಜ್ಯಸಭಾ ಸದಸ್ಯೆ
ಸಭೆಯಲ್ಲಿ ಉದ್ಯಮಿ ಗೌತಮ್ ಅದಾನಿ ಅವರೂ ಇದ್ದರು ಎಂದು ಹೇಳುವ ಮೂಲಕ ಅಜಿತ್ ಅವರು ಮಹತ್ವದ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಸಭೆಯಲ್ಲಿ ಹಾಜರಿದ್ದ ಅದಾನಿ ಅವರಿಗೆ ಫಡಣವೀಸ್–ಶಿಂದೆ ಸರ್ಕಾರವು ಕೋಟಿಗಟ್ಟಲೆ ಬೆಲೆ ಬಾಳುವ ಭೂಮಿಯನ್ನು ತೀರಾ ಕಡಿಮೆ ಬೆಲೆಗೆ ಮಾರಿದೆ.–ಸುಪ್ರಿಯಾ ಶ್ರೀನೇತ್, ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಹಾಗೂ ಡಿಜಿಟಲ್ ವೇದಿಕೆ ಮುಖ್ಯಸ್ಥೆ
ಮೋದಿ ಮತ್ತು ಅದಾನಿ ನಡುವಿನ ಸಂಬಂಧಕ್ಕೆ ಇದಕ್ಕಿಂತಲೂ ಉತ್ತಮವಾದ ಆಘಾತಕಾರಿಯಾದ ವಿಚಾರವಿರಲು ಸಾಧ್ಯವಿಲ್ಲ. ಲಜ್ಜೆಗೆಟ್ಟ ಸಂಬಂಧವನ್ನು ತೆರೆದಿಡುವ ಹೊಸ ಉದಾಹರಣೆಯೊಂದು ಬಹಿರಂಗಗೊಂಡಿದೆ. ಪಕ್ಷಗಳ ಸಭೆಯೊಂದರಲ್ಲಿ ಅಧಿಕೃತವಾಗಿ ಉದ್ಯಮಿಯೊಬ್ಬರು ಹೇಗೆ ಪಾಲ್ಗೊಳ್ಳುತ್ತಾರೆ?–ಪವನ್ ಖೇರಾ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.