ADVERTISEMENT

ಎನ್‌ಸಿಪಿಯ ನವಾಬ್ ಪರ ಪ್ರಚಾರ ಮಾಡಲ್ಲ, ಅವರ ಮಗಳ ಸ್ಪರ್ಧೆಗೆ ವಿರೋಧವಿಲ್ಲ: ಬಿಜೆಪಿ

ಪಿಟಿಐ
Published 30 ಅಕ್ಟೋಬರ್ 2024, 11:22 IST
Last Updated 30 ಅಕ್ಟೋಬರ್ 2024, 11:22 IST
ನವಾಬ್‌ ಮಲಿಕ್‌
ನವಾಬ್‌ ಮಲಿಕ್‌   

ಮುಂಬೈ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಜೊತೆ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ನವಾಬ್‌ ಮಲಿಕ್‌ ಅವರ ಪರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮಾಡುವುದಿಲ್ಲ. ಆದರೆ, ಅವರ ಮಗಳ ಸ್ಪರ್ಧೆಗೆ ತನ್ನ ವಿರೋಧವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ನವಾಬ್‌ ಅವರು ಅಜಿತ್‌ ಪವಾರ್‌ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್‌ (ಎನ್‌ಸಿಪಿ) ಪಕ್ಷದ ಪ್ರಮುಖ ನಾಯಕ.  ಅವರು, ಮಂಖುರ್ದ್‌–ಶಿವಾಜಿ ನಗರ ಕ್ಷೇತ್ರದ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಅವರ ಪುತ್ರಿ ಸನಾ ಮಲಿಕ್‌ ಅವರಿಗೆ ಅನುಶಕ್ತಿ ನಗರ ಕ್ಷೇತ್ರದಿಂದ ಎನ್‌ಸಿಪಿ ಟಿಕೆಟ್‌ ನೀಡಿದೆ. ಈ ಕ್ಷೇತ್ರವನ್ನು ಈ ಹಿಂದೆ ಹಲವು ಬಾರಿ ನವಾಬ್‌ ಪ್ರತಿನಿಧಿಸಿದ್ದರು. ಸನಾ ಅವರಿಗೆ ಇದು ಮೊದಲ ಚುನಾವಣೆಯಾಗಿದೆ.

ದಾವೂದ್‌, ಆತನ ಸಹಚರರಾದ ಛೋಟಾ ಶಕೀಲ್‌ ಮತ್ತು ಟೈಗರ್‌ ಮೆಮನ್‌ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ನವಾಬ್‌ ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) 2022ರಲ್ಲಿ ಬಂಧಿಸಿತ್ತು. ವೈದ್ಯಕೀಯ ನೆಲೆಯಲ್ಲಿ ಈ ವರ್ಷ ಜುಲೈನಲ್ಲಿ ಜಾಮೀನು ಪಡೆದಿದ್ದಾರೆ.

ADVERTISEMENT

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್‌ 20ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಬರಲಿದೆ.

ಬಿಜೆಪಿ ಹಾಗೂ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಇರುವ ಆಡಳಿತಾರೂಢ 'ಮಹಾಯುತಿ' ಮೈತ್ರಿಕೂಟದಲ್ಲಿರುವ ಎನ್‌ಸಿಪಿಯು, ಅಭ್ಯರ್ಥಿಯನ್ನು ಅಖೈರುಗೊಳಿಸುವ ಪ್ರಕ್ರಿಯೆ ಮುಗಿಯುವುದಕ್ಕೆ ಕೆಲವೇ ನಿಮಿಷಗಳಿದ್ದಾಗ, ನವಾಬ್‌ ಅವರ ಸ್ಪರ್ಧೆಗೆ ಅನುಮತಿ ನೀಡಿದೆ.

ಬಿಜೆಪಿ ಮುಂಬೈ ಘಟಕದ ಅಧ್ಯಕ್ಷ ಆಶಿಷ್‌ ಶೆಲಾರ್‌ ಅವರು ನವಾಬ್‌ ಸ್ಪರ್ಧೆ ಕುರಿತು ವಿಡಿಯೊ ಸಂದೇಶ ಹಂಚಿಕೊಂಡಿದ್ದಾರೆ. ನವಾಬ್‌ ಪರ ತಮ್ಮ ಪಕ್ಷವು ಪ್ರಚಾರ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

'ಬಿಜೆಪಿಯು ತನ್ನ ನಿಲುವನ್ನು ಆರಂಭದಲ್ಲೇ ಹೇಳಿದೆ. ಮಹಾಯುತಿ ಮೈತ್ರಿಕೂಟದಲ್ಲಿರುವ ಎಲ್ಲ ಪಕ್ಷಗಳಿಗೂ ತಮ್ಮ ಅಭ್ಯರ್ಥಿಗಳನ್ನು ನಿರ್ಧರಿಸುವ ಸ್ವಾತಂತ್ರ್ಯವಿದೆ. ಎನ್‌ಸಿಪಿಯಿಂದ ನವಾಬ್‌ ಮಲಿಕ್‌ ನಾಮಪತ್ರ ಸಲ್ಲಿಸಿರುವ ಬಗ್ಗೆ ಮಾತ್ರ ನಮ್ಮಲ್ಲಿ ಕಳವಳವಿದೆ. ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹಾಗೂ ನಾನು ಮತ್ತೆಮತ್ತೆ ಈ ವಿಚಾರ ಸ್ಪಷ್ಟಪಡಿಸಿದ್ದೇವೆ. ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ, ಬಿಜೆಪಿಯು ನವಾಬ್‌ ಪರ ಪ್ರಚಾರ ನಡೆಸುವುದಿಲ್ಲ. ದಾವೂದ್‌ ಹಾಗೂ ಆತನ ಸಹಚರರ ಬಗೆಗಿನ ನಮ್ಮ ನಿಲುವು ಸ್ಪಷ್ಟವಾಗಿದೆ' ಎಂದಿದ್ದಾರೆ.

ನವಾಬ್‌ ಪುತ್ರಿ ಸನಾ ಸ್ಪರ್ಧೆ ಕುರಿತಂತೆ, 'ಅವರ ವಿರುದ್ಧ ಯಾವುದೇ ಸಾಕ್ಷ್ಯಗಳು ಅಥವಾ ಮಾಹಿತಿ ಹೊರಬರುವವರೆಗೆ ಅವರನ್ನು ಮಹಾಯುತಿ ಅಭ್ಯರ್ಥಿ ಎಂದು ಬಿಜೆಪಿ ಪರಿಗಣಿಸಲಿದೆ. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ' ಎಂದು ಖಚಿತಪಡಿಸಿದ್ದಾರೆ.

ನವಾಬ್‌ ಅವರು, 'ಮಹಾಯುತಿ' ಸರ್ಕಾರ ರಚನೆಗೂ ಮುನ್ನ ಅಸ್ತಿತ್ವದಲ್ಲಿದ್ದ 'ಮಹಾ ವಿಕಾಸ ಆಘಾಡಿ' (ಎಂವಿಎ) ಸರ್ಕಾರದಲ್ಲಿ ಸಚಿವರಾಗಿದ್ದರು. ಕಳೆದ ವರ್ಷ ಜುಲೈನಲ್ಲಿ ಎನ್‌ಸಿಪಿ ವಿಭಜನೆಯಾದಾಗ, ನವಾಬ್ ಅವರು ಅಜಿತ್‌ ಪವಾರ್‌ ಬಣ ಸೇರಿದ್ದರು.

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣ ಸಂಬಂಧ ಬಾಲಿವುಡ್‌ ನಟ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಅವರನ್ನು ಬಂಧಿಸಿದ್ದ ಕುರಿತು 2021ರಲ್ಲಿ ಹೇಳಿಕೆ ನೀಡಿದ್ದ ನವಾಬ್‌, ಮಾದಕ ವಸ್ತು ನಿಗ್ರಹ ದಳದ (ಎನ್‌ಸಿಬಿ) ಮುಂಬೈ ವಲಯದ ನಿರ್ದೇಶಕ ಸಮೀರ್‌ ವಾಂಖೆಡೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೊಂದು ನಕಲಿ ಪ್ರಕರಣ ಎಂದು ದೂರಿದ್ದರು. ಎನ್‌ಸಿಬಿಯು ಆರ್ಯನ್‌ ವಿರುದ್ಧ ಸಲ್ಲಿಸಿದ್ದ ಆರೋಪಪಟ್ಟಿಯನ್ನು, ಸಾಕ್ಷ್ಯಗಳ ಕೊರತೆ ಆಧಾರದಲ್ಲಿ ಸ್ವಲ್ಪ ದಿನಗಳ ಬಳಿಕ ಕೈಬಿಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.