ADVERTISEMENT

ಮಹಾ ಚುನಾವಣೆ: ಎಂವಿಎ ಮೈತ್ರಿಕೂಟವನ್ನು 'ಮಹಾ ವಸೂಲಿ ಆಘಾಡಿ' ಎಂದ ಸಿಎಂ ಶಿಂದೆ

ಪಿಟಿಐ
Published 4 ನವೆಂಬರ್ 2024, 2:22 IST
Last Updated 4 ನವೆಂಬರ್ 2024, 2:22 IST
ಏಕನಾಥ ಶಿಂದೆ
ಏಕನಾಥ ಶಿಂದೆ   

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು, ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ, ಶರದ್‌ ಪವಾರ್‌ ಬಣದ ಎನ್‌ಸಿಪಿ ಹಾಗೂ ಕಾಂಗ್ರೆಸ್‌ ನೇತೃತ್ವದ 'ಮಹಾ ವಿಕಾಸ ಆಘಾಡಿ' ಮೈತ್ರಿಕೂಟವನ್ನು 'ಮಹಾ ವಸೂಲಿ ಆಘಾಡಿ' ಎಂದು ಕರೆದಿದ್ದಾರೆ.

ತಮ್ಮ ಸರ್ಕಾರವು, ಹೆಣ್ಣು ಮಕ್ಕಳ ಜೀವನಮಟ್ಟವನ್ನು ಸುಧಾರಿಸುವ 'ಲಡ್ಕೀ ಬಹೀನ್' ರೀತಿಯ ಯೋಜನೆಗಳತ್ತ ಗಮನಹರಿಸುತ್ತಿದೆ ಎಂದು ಪ್ರತಿಪಾದಿಸಿರುವ ಸಿಎಂ, ಯೋಜನೆಯ ನವೆಂಬರ್ ಕಂತನ್ನು ಈಗಾಗಲೇ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಡಿಸೆಂಬರ್‌ ಕಂತನ್ನು ಚುನಾವಣೆಯ ನಂತರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ವಾರ್ಷಿಕ ₹ 2.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ಮಹಿಳೆಯರಿಗೆ ಮಾಸಿಕ ₹ 1,500 ನೀಡಲಾಗುತ್ತದೆ.

ADVERTISEMENT

288 ಸದಸ್ಯ ಬಲದ 'ಮಹಾ' ವಿಧಾನಸಭೆಗೆ ನವೆಂಬರ್‌ 20ರಂದು ಮತದಾನ ನಡೆಯಲಿದೆ. 23ರಂದು ಫಲಿತಾಂಶ ಪ್ರಕಟವಾಗಲಿದೆ.

ಮುಂಬೈನ ಕುರ್ಲಾ ಮತ್ತು ಅಂಧೇರಿ ಪೂರ್ವ ಕ್ಷೇತ್ರ ವ್ಯಾಪ್ತಿಯಲ್ಲಿ ಶಿವಸೇನಾ ಪರ ಪ್ರಚಾರಕ್ಕೆ ಚಾಲನೆ ನೀಡಿದ ಶಿಂಧೆ, ಮಹಾನಗರವನ್ನು ಕೊಳಗೇರಿ ಮುಕ್ತಗೊಳಿಸುವುದಾಗಿ ಮತ್ತು ಬಡವರಿಗೆ ಮನೆಗಳನ್ನು ಒದಗಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.

ನಗರದಲ್ಲಿನ ಮೂಲಸೌಕರ್ಯ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದೂ ಪ್ರತಿಪಾದಿಸಿದ್ದಾರೆ.

ತಮ್ಮ ಶಿವಸೇನಾ ಬಣ, ಬಿಜೆಪಿ ಹಾಗೂ ಅಜಿತ್‌ ಪವಾರ್‌ ನೇತೃತ್ವ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷವನ್ನೊಳಗೊಂಡ (ಎನ್‌ಸಿಪಿ) 'ಮಹಾಯುತಿ' ಮೈತ್ರಿ ಸರ್ಕಾರದ ಕಲ್ಯಾಣ ಮತ್ತು ಅಭಿವೃದ್ಧಿ ಸಾಧನೆಗಳ ಬಗ್ಗೆ ಒತ್ತಿ ಹೇಳಿದ ಅವರು, ಮಾಜಿ ಸಿಎಂ ಉದ್ಧವ್‌ ಠಾಕ್ರೆ ಅವರ 'ಎಂವಿಎ', ಹಫ್ತಾ ವಸೂಲಿ ಕೂಟವಾಗಿತ್ತು ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನೂ ಗುರಿಯಾಗಿಸಿ ವಾಗ್ದಾಳಿ ನಡೆಸಿರುವ ಅವರು, ವಿರೋಧ ಪಕ್ಷಗಳು ತಮ್ಮಿಂದ ಈಡೇರಿಸಲಾಗಿದ ಭರವಸೆಗಳನ್ನು ನೀಡುತ್ತಿವೆ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.