ಠಾಣೆ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ವಿರುದ್ಧ ಕೊಪ್ರಿ–ಪಂಚಪಖಾಡಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಶಿವಸೇನಾ (ಯುಬಿಟಿ) ಅಭ್ಯರ್ಥಿ ಕೇದಾರ್ ದಿಘೆ ಅವರು, ಚುನಾವಣಾ ಅಕ್ರಮಗಳು ನಡೆದಿದೆ ಎಂದು ಆರೋಪಿಸಿದ್ದಾರೆ.
ಭದ್ರತಾ ಕೊಠಡಿಗಳ ಬದಲಾಗಿ ವೀಕ್ಷಣಾ ಕೊಠಡಿಗಳಲ್ಲಿ ಮತಯಂತ್ರಗಳನ್ನು ಸಂಗ್ರಹಿಸಿದ್ದೂ ಸೇರಿದಂತೆ ಮತದಾನೋತ್ತರ ಪ್ರಕ್ರಿಯೆಗಳಲ್ಲಿ ಅಕ್ರಮ ನಡೆದಿವೆ ಎಂದು ದೂರಿರುವ ಅವರು, ಮರು ಮತದಾನಕ್ಕೆ ಆಗ್ರಹಿಸಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ, ವೀಕ್ಷಣಾ ಕೊಠಡಿಯಲ್ಲಿ ಸಿಸಿಟಿವಿ ಕಣ್ಗಾವಲು ಇಲ್ಲ ಎಂಬುದನ್ನು ಒತ್ತಿಹೇಳುವ ಮೂಲಕ ತಮ್ಮ ಆರೋಪವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
'ಅಂಚೆ ಮತಪತ್ರಗಳು ಇರುವ ಲಕೋಟೆಗಳನ್ನು ಸೀಲ್ ಮಾಡಿಲ್ಲ. ಚುನಾವಣಾ ಆಯೋಗವು ಈ ಅಕ್ರಮಗಳನ್ನು ಪರಿಶೀಲಿಸಬೇಕು. ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಕ್ಷೇತ್ರದಲ್ಲಿ ಮರುಮತದಾನಕ್ಕೆ ಆದೇಶಿಸಬೇಕು' ಎಂದು ದಿಘೆ ಒತ್ತಾಯಿಸಿದ್ದಾರೆ.
288 ಸದಸ್ಯ ಬಲದ ಮಹಾ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ. ಇಂದು ಎಣಿಕೆ ಪ್ರಕ್ರಿಯೆ ಆರಂಭವಾಗಿದೆ.
ಬುಧವಾರ ಮತದಾನ ಮುಗಿಯುತ್ತಿದ್ದಂತೆ ಪ್ರಕಟವಾದ ಹಲವು ಚುನಾವಣೋತ್ತರ ಸಮೀಕ್ಷೆಗಳು, ಬಿಜೆಪಿ ನೇತೃತ್ವದ ಆಡಳಿತಾರೂಢ 'ಮಹಾಯುತಿ' ಮೈತ್ರಿಕೂಟ ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿವೆ.
ಬಿಜೆಪಿ, ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಶಿವಸೇನಾ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ, 'ಮಹಾಯುತಿ' ಮೈತ್ರಿಕೂಟದಲ್ಲಿವೆ.
ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ, ಶರದ್ ಪವಾರ್ ಅವರ ಎನ್‌ಸಿಪಿ ಹಾಗೂ ಕಾಂಗ್ರೆಸ್ ಎಂವಿಎ ವಿರೋಧ ಪಕ್ಷಗಳ ಮೈತ್ರಿಕೂಟ 'ಮಹಾ ವಿಕಾಸ ಆಘಾಡಿ'ಯಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.