ಮುಂಬೈ: ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ನಿರಂತರವಾಗಿ ಅವಮಾನಿಸುತ್ತಿದೆ ಎಂದು ಕೇಂದ್ರ ಸಚಿವ ಹಾಗೂ ಲೋಕಜನಶಕ್ತಿ ಪಕ್ಷದ (ರಾಮ್ ವಿಲಾಸ್ ಪಾಸ್ವಾನ್) ಮುಖಂಡ ಚಿರಾಗ್ ಪಾಸ್ವಾನ್ ವಾಗ್ದಾಳಿ ನಡೆಸಿದ್ದಾರೆ.
ಮುಂಬೈನ ದಾದರ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರಮಿಸುತ್ತಿದ್ದಾರೆ. ಇದರಿಂದಾಗಿ ವಿರೋಧ ಪಕ್ಷಗಳ ನಾಯಕರು ಭಯಭೀತರಾಗಿದ್ದು, ಸಾರ್ವಜನಿಕವಾಗಿ ಸಂವಿಧಾನವನ್ನು ಪ್ರದರ್ಶಿಸಲು ಕಾರಣವಾಗಿದೆ’ ಎಂದು ಕಿಡಿಕಾರಿದ್ದಾರೆ.
‘1989ಕ್ಕಿಂತ ಮೊದಲು ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಅಂಬೇಡ್ಕರ್ ಅವರ ಚಿತ್ರವನ್ನು ಹಾಕಿರಲಿಲ್ಲ. ಆದರೆ, ಒಂದೇ ಕುಟುಂಬದ (ಗಾಂಧಿ ಕುಟುಂಬ) ಮೂವರು ಸದಸ್ಯರ ಭಾವಚಿತ್ರಗಳು ಅಲ್ಲಿನ ಗೋಡೆಗಳನ್ನು ಅಲಂಕರಿಸಿದ್ದವು. ಇದು ಕಾಂಗ್ರೆಸ್ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ’ ಎಂದು ಪಾಸ್ವಾನ್ ಗುಡುಗಿದ್ದಾರೆ.
ಕಾಂಗ್ರೆಸ್ ಪಕ್ಷವು ಸಂವಿಧಾನವನ್ನು ದೇಶದ ‘ಡಿಎನ್ಎ’ ಎಂದು ಪರಿಗಣಿಸುತ್ತದೆ. ಆದರೆ ಆಡಳಿತಾರೂಢ ಬಿಜೆಪಿ ಮತ್ತು ಆರ್‌ಎಸ್ಎಸ್ ಅದನ್ನು ‘ಖಾಲಿ ಪುಸ್ತಕ’ವಾಗಿ ಪರಿಗಣಿಸುತ್ತವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಆರೋಪಿಸಿದ್ದರು.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು, ‘ರಾಹುಲ್ ಗಾಂಧಿ ಅವರು ಪ್ರಚಾರ ರ‍್ಯಾಲಿಗಳಲ್ಲಿ ಖಾಲಿ ಹಾಳೆ ಇರುವ ಸಂವಿಧಾನದ ಪ್ರತಿಯನ್ನು ತೋರಿಸುತ್ತಾರೆ’ ಎಂದು ಆರೋಪಿಸಿದ್ದರು. ಅದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ಈ ಹೇಳಿಕೆ ಮೂಲಕ ತಿರುಗೇಟು ನೀಡಿದ್ದರು.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಮತದಾನ ನಡೆಯಲಿದೆ. ಮೂರು ದಿನಗಳ ಬಳಿಕ (ನವೆಂಬರ್ 23ರಂದು) ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.