ADVERTISEMENT

SC, ST ಮೀಸಲಾತಿ ಕಸಿದು ಮುಸ್ಲಿಮರಿಗೆ ಹಂಚಲು ಕಾಂಗ್ರೆಸ್ ಯತ್ನ: ಅಮಿತ್ ಶಾ

ಪಿಟಿಐ
Published 10 ನವೆಂಬರ್ 2024, 13:38 IST
Last Updated 10 ನವೆಂಬರ್ 2024, 13:38 IST
<div class="paragraphs"><p>ರಾಹುಲ್ ಗಾಂಧಿ ಹಾಗೂ ಅಮಿತ್ ಶಾ</p></div>

ರಾಹುಲ್ ಗಾಂಧಿ ಹಾಗೂ ಅಮಿತ್ ಶಾ

   

ಪಿಟಿಐ ಚಿತ್ರಗಳು

ಮುಂಬೈ: ಕಾಂಗ್ರೆಸ್‌ ಪಕ್ಷವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಮೀಸಲಾತಿ ಕಸಿದು ಅದನ್ನು ಮುಸ್ಲಿಮರಿಗೆ ನೀಡಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಆರೋಪಿಸಿದ್ದಾರೆ.

ADVERTISEMENT

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಪ್ರಣಾಳಿಕೆ ‘ಸಂಕಲ್ಪ ಪತ್ರ’ವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಮುಸ್ಲಿಂ ಧರ್ಮಗುರುಗಳ ನಿಯೋಗವು ತಮ್ಮ ಸಮುದಾಯದ ಹಲವಾರು ಬೇಡಿಕೆಗಳ ಕುರಿತ ಪತ್ರವನ್ನು ಈಚೆಗೆ ಸಲ್ಲಿಸಿದೆ ಎಂಬ ಕುರಿತ ವರದಿಯನ್ನು ನಾನು ನೋಡಿದ್ದೇನೆ. ಮುಸ್ಲಿಮರ ಮೀಸಲಾತಿಗೆ ಸಂಬಂಧಿಸಿದ ಬೇಡಿಕೆಯೂ ಅದರಲ್ಲಿತ್ತು. ಮಹಾರಾಷ್ಟ್ರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ನಾನಾ ಪಟೋಲೆ ಅವರು ಆ ಬೇಡಿಕೆಯನ್ನು ಒಪ್ಪಿಕೊಂಡಿದ್ದಾರೆ’ ಎಂದರು.

‘ಎಸ್‌ಸಿ, ಎಸ್‌ಟಿ, ಆದಿವಾಸಿಗಳು ಮತ್ತು ಒಬಿಸಿಗಳ ಮೀಸಲಾತಿ ಹಕ್ಕನ್ನು ಕಸಿದು ಮುಸ್ಲಿಮರಿಗೆ ನೀಡುವವರ ಪರವಾಗಿ ಮಹಾರಾಷ್ಟ್ರದ ಜನರು ಇದ್ದಾರೆಯೇ’ ಎಂದು ಪ್ರಶ್ನಿಸಿದರು.

‘ಅಂಬೇಡ್ಕರ್ ಅವರ ಸಂವಿಧಾನ ದಲ್ಲಿ, ಧರ್ಮದ ಆಧಾರದ ಮೇಲೆ ಮೀಸಲಾತಿಗೆ ಯಾವುದೇ ಅವಕಾಶವಿಲ್ಲ. ಆದರೆ, ಅಧಿಕಾರಕ್ಕೆ ಬರುವ ಮುನ್ನವೇ ಕಾಂಗ್ರೆಸ್‌ ಪಕ್ಷವು ಮೀಸಲಾತಿಯ ಭರವಸೆ ನೀಡಿದೆ. ಜನರು ಇದನ್ನು ಅರ್ಥಮಾಡಿ ಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮಹಾಯುತಿ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಮತಾಂತರ ತಡೆಗೆ ಕಠಿಣ ಕಾನೂನು ತರುವುದರ ಬಗ್ಗೆ ಚರ್ಚಿಸಲು ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು. ‘ಮಹಾಯುತಿ’ ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ, ‘ಏಕನಾಥ ಶಿಂದೆ ಅವರು ಈಗ ನಮ್ಮ ಮುಖ್ಯಮಂತ್ರಿ ಆಗಿದ್ದಾರೆ. ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ಮೈತ್ರಿಕೂಟದ ಮೂರು ಪಕ್ಷಗಳ ಮುಖಂಡರು ಚರ್ಚಿಸಿ ಮುಂದಿನ ಮುಖ್ಯಮಂತ್ರಿಯನ್ನು ನಿರ್ಧರಿಸುವರು’ ಎಂದರು.

ಉದ್ಧವ್‌ ವಿರುದ್ಧ ಟೀಕೆ:

ಎಂವಿಎ ಜತೆ ಕೈಜೋಡಿಸಿರುವ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ವಿರುದ್ಧ ಹರಿಹಾಯ್ದ ಶಾ, ‘ರಾಮಮಂದಿರ, ಪೌರತ್ವ (ತಿದ್ದುಪಡಿ) ಕಾಯ್ದೆ, ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮತ್ತು ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವವರ ಜತೆ ಉದ್ಧವ್‌ ಇದ್ದಾರೆ’ ಎಂದರು.

‘ಸಾವರ್ಕರ್ ಮತ್ತು ಬಾಳಾಸಾಹೇಬ್ ಠಾಕ್ರೆ ಅವರನ್ನು ಹೊಗಳಿ ಕೆಲವು ಮಾತು ಗಳನ್ನಾಡಲು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ವಿನಂತಿಸಬಹುದೇ ಎಂದು ಉದ್ಧವ್‌ ಠಾಕ್ರೆ ಅವರನ್ನು ಕೇಳಲು ಬಯಸುತ್ತೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.