ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನದ ಪ್ರತಿಯನ್ನು ‘ನಗರ ನಕ್ಸಲಿಸಂ’ ಜತೆ ಜೋಡಿಸುವ ಮೂಲಕ ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಭೆಗಳು ಮತ್ತು ಚುನಾವಣಾ ಪ್ರಚಾರ ರ‍್ಯಾಲಿಗಳಲ್ಲಿ ಸಂವಿಧಾನದ ಪ್ರತಿ (ಕೆಂಪು ಬಣ್ಣದ ಪಾಕೆಟ್ ಬುಕ್) ಪ್ರದರ್ಶಿಸುತ್ತಾ ಬಂದಿದ್ದಾರೆ. ರಾಹುಲ್ ಅವರ ನಡೆಯನ್ನು ಮೋದಿ ಮತ್ತು ಶಾ ಟೀಕಿಸಿದ್ದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟದ ಪ್ರಣಾಳಿಕೆ ಯನ್ನು ಬಿಡುಗಡೆ ಮಾಡಲು ಮುಂಬೈನಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿ ಯಲ್ಲಿ ಖರ್ಗೆ ಅವರು ಪ್ರಧಾನಿ ಹಾಗೂ ಗೃಹ ಸಚಿವರಿಗೆ ತಿರುಗೇಟು ನೀಡಿದರು.
‘ರಾಹುಲ್ ಅವರ ಕೈಯಲ್ಲಿರುವ ಪುಸ್ತಕವನ್ನು ಮೋದಿ ಅವರು ‘ನಗರ ನಕ್ಸಲ್’ ಪುಸ್ತಕ ಎಂದು ಕರೆದಿದ್ದಾರೆ. ಅದರಲ್ಲಿ ಮಾರ್ಕ್ಸ್‌ವಾದಿ ಸಾಹಿತ್ಯ ಇದೆ ಎಂದಿದ್ದಾರೆ. ಆದರೆ ರಾಹುಲ್ ಅವರು ಇದೇ ರೀತಿಯ ಪುಸ್ತಕವನ್ನು ರಾಮನಾಥ್ ಕೋವಿಂದ್ ಅವರಿಗೆ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿ ಕೊಂಡ ಮರುದಿನ (2017ರ ಜುಲೈ 26) ನೀಡಿದ್ದರು’ ಎಂದರು. ನವದೆಹಲಿ ಯಲ್ಲಿ ಅಂದು ನಡೆದಿದ್ದ ಸಮಾರಂಭದ ಫೋಟೊಗಳನ್ನೂ ಖರ್ಗೆ ಪ್ರದರ್ಶಿಸಿದರು.
‘ಕೆಂಪು ಬಣ್ಣದ ಪುಸ್ತಕದ ಒಳಭಾಗದಲ್ಲಿ ಖಾಲಿ ಹಾಳೆಗಳಿವೆ ಎಂದು ಮೋದಿ ಹಾಗೂ ಶಾ ಹೇಳುತ್ತಾರೆ. ಇಡೀ ಸಂವಿಧಾನ ಈ ಪುಸ್ತಕದಲ್ಲಿ ಇಲ್ಲ. ಸಂವಿಧಾನದ ಸಾರಾಂಶವನ್ನು ಇದರಲ್ಲಿ ನೀಡಲಾಗಿದೆ. ವಕೀಲರು ಮತ್ತು ಚಿಂತಕರು ಇದೇ ಪುಸ್ತಕವನ್ನು ಟಿಪ್ಪಣಿಯಾಗಿ ಬಳಸುವರು’ ಎಂದು ವಿವರಿಸಿದರು.
ರಾಹುಲ್ ಅವರು ಕೆಂಪು ಬಣ್ಣದ ಪುಸ್ತಕ ಕೈಯಲ್ಲಿ ಹಿಡಿದುಕೊಂಡು ನಗರ ನಕ್ಸಲರು ಮತ್ತು ದಂಗೆಕೋರರ ಜತೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಈಚೆಗೆ ಆರೋಪಿಸಿದ್ದರು.
‘ಮಹಾರಾಷ್ಟ್ರದಲ್ಲೂ ಜಾತಿಗಣತಿ’
‘ಎಂವಿಎ ಅಧಿಕಾರಕ್ಕೆ ಬಂದರೆ ಮಹಾರಾಷ್ಟ್ರದಲ್ಲಿ ಜಾತಿಗಣತಿ ನಡೆಸಲಾಗುವುದು. ತೆಲಂಗಾಣದಲ್ಲಿ ಜಾತಿಗಣತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ’ ಎಂದು ಖರ್ಗೆ ಹೇಳಿದರು.
‘ಜಾತಿಗಣತಿ ನಡೆಸುವುದು ದೇಶವನ್ನು ವಿಭಜಿಸಲು ಅಲ್ಲ. ಉದ್ಯೋಗದ ವಿವರ, ಆರ್ಥಿಕ ಸ್ಥಿತಿ, ಸಾಮಾಜಿಕ ಸ್ಥಾನಮಾನ ಮತ್ತು ಇತರ ವಿಷಯಗಳ ಬಗ್ಗೆ ನಿಖರವಾದ ಮಾಹಿತಿಯನ್ನು ತಿಳಿಯುವುದು ಇದರ ಉದ್ದೇಶ. ಜಾತಿಗಣತಿ ವರದಿ ಆಧರಿಸಿ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ನಾವು ಯೋಜನೆ ರೂಪಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.