ADVERTISEMENT

Maharashtra Elections 2024 | ಬದಲಾದ ಮರಾಠಾವಾಡ; ಕಾಣುತ್ತಿದೆ ಜಾತಿ ಸಂಘರ್ಷ 

ಜರಾಂಗೆ ಹೋರಾಟದ ಪ್ರಭಾವ ಕಡೆಗಣಿಸುವಂತಿಲ್ಲ; ವಿಧಾನಸಭೆ ಚುನಾವಣೆಯಲ್ಲೂ ಬೀರಲಿದೆ ಪರಿಣಾಮ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 0:30 IST
Last Updated 27 ಅಕ್ಟೋಬರ್ 2024, 0:30 IST
   

ಛತ್ರಪತಿ ಸಂಭಾಜಿನಗರ: ಕರ್ನಾಟಕ ಮತ್ತು ತೆಲಂಗಾಣದ ಗಡಿಯಲ್ಲಿರುವ ಮರಾಠವಾಡ ಒಂದು ದಶಕದ ಅವಧಿಯಲ್ಲಿ ಬಹಳಷ್ಟು ಬದಲಾಗಿದೆ. ಮರಾಠರು ಮತ್ತು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ನಡುವೆ ಮೀಸಲಾತಿ ಕುರಿತ ಜಾತಿ ಸಂಘರ್ಷ ಉದ್ಭವಿಸಿರುವುದು ಈ ನೆಲದಲ್ಲಿ ಈಗ ಸ್ಷಷ್ಟವಾಗಿ ಗೋಚರಿಸುತ್ತಿದೆ.

‘ಇದು ಈಗ ಹಳೆಯ ಮರಾಠವಾಡವಲ್ಲ. ಮೀಸಲಾತಿ ವಿಷಯದಲ್ಲಿ ಮರಾಠರು ಮತ್ತು ಒಬಿಸಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿರುವುದನ್ನು ನಾವು ಇಲ್ಲಿ ಕಾಣುತ್ತಿದ್ದೇವೆ’ ಎಂದು ಛತ್ರಪತಿ ಸಂಭಾಜಿನಗರದ ಪಾಚೋಡ್‌ನ ರೈತ ನಾನಾಸಾಹೇಬ್ ನರ್ವಾಡೆ ಹೇಳುತ್ತಾರೆ. 

ಹತ್ತಿ, ಮೂಸಂಬಿ, ಕೇಸರ-ಮಾವಿನ ಕೃಷಿಯಲ್ಲಿ ತೊಡಗಿರುವ ರೈತ ಮರಾಠಾದ ನರ್ವಾಡೆ, ‘ಜನರಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿವೆ. ಎರಡು ಜಾತಿಗಳಲ್ಲಿ ಪರಸ್ಪರ ಪ್ರೀತಿ ಕಡಿಮೆಯಾಗಿದೆ’ ಎಂದು ಹೇಳಿದರು. 

ADVERTISEMENT

ಛತ್ರಪತಿ ಸಂಭಾಜಿನಗರವು ಮರಾಠವಾಡ ಪ್ರದೇಶದ ವಿಭಾಗೀಯ ಕೇಂದ್ರವಾಗಿದೆ. ಇದು ಛತ್ರಪತಿ ಸಂಭಾಜಿನಗರ (ಹಿಂದಿನ ಹೆಸರು ಔರಂಗಾಬಾದ್) ಬೀಡ್, ಹಿಂಗೋಲಿ, ಜಾಲ್ನಾ, ಲಾತೂರ್, ನಾಂದೇಡ್, ಧಾರಾಶಿವ್ (ಹಿಂದಿನ ಹೆಸರು ಒಸ್ಮಾನಾಬಾದ್) ಮತ್ತು ಪರ್ಭಾನಿ ಈ ಎಂಟು ಜಿಲ್ಲೆಗಳನ್ನು ಹೊಂದಿದೆ. ಕಳೆದ 14 ತಿಂಗಳಲ್ಲಿ ಈ ಪ್ರದೇಶವು ಹಲವು ಪ್ರತಿಭಟನೆಗಳಿಗೂ ಸಾಕ್ಷಿಯಾಗಿದೆ.

ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಅವರು ಕಳೆದ 14 ತಿಂಗಳಿನಿಂದ ಅಂತರವಾಲಿ ಸರಾಟಿಯಲ್ಲಿ ಏಳು ಬಾರಿ ಉಪವಾಸ ಸತ್ಯಾಗ್ರಹಗಳನ್ನು ನಡೆಸಿದ್ದಾರೆ.

ಜಾರಂಗೆ ಅವರ ಹೋರಾಟಕ್ಕೆ ಪ್ರತಿಯಾಗಿ ಒಬಿಸಿ ಸಂಘರ್ಷ ಸೇನಾ ಸಂಸ್ಥಾಪಕ ಲಕ್ಷ್ಮಣ್ ಹಕೆ ಅವರು ಅಂತರವಾಲಿ ಸರಾಟಿಗೆ ಕೇವಲ ಆರು ಕಿ.ಮೀ. ದೂರದಲ್ಲಿರುವ ವಾಡಿಗೋದ್ರಿಯಲ್ಲಿ ಮೂರು ತಿಂಗಳಿಂದ ಧರಣಿ ನಡೆಸುತ್ತಿದ್ದಾರೆ.

‘ನಾವು ಒಂದು ಸಕಾರಣಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ’ ಎನ್ನುವುದು ಅಂತರವಾಲಿ ಸರಾಟಿ ಗ್ರಾಮದ ಸುರೇಶ ಪಾಟೀಲ ಅವರ ಸ್ಪಷ್ಟ ನುಡಿ.

‘ನಾವು ಚಿಕ್ಕವರಿದ್ದಾಗ, ಎಲ್ಲ ಸಮುದಾಯದಲ್ಲೂ ನಮಗೆ ಸ್ನೇಹಿತರಿದ್ದರು. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ಮರಾಠರು ಮತ್ತು ನಮ್ಮ ನಡುವೆ ಆ ಸ್ನೇಹದ ಕೊಂಡಿ ತಪ್ಪಿದಂತೆ ತೋರುತ್ತಿದೆ. ಆದರೆ, ನಮ್ಮ ನಡುವೆ ಯಾವುದೇ ದ್ವೇಷವಿಲ್ಲ. ಕೆಲವು ಭಿನ್ನಾಭಿಪ್ರಾಯಗಳಷ್ಟೇ ಇವೆ’ ಎಂದು ವಾಡಿಗೋದ್ರಿಯಲ್ಲಿ ಕೆಲಸ ಮಾಡುವ ಒಬಿಸಿ ಸಮುದಾಯದ ಸುರೇಶ್ ಪಾಟ್ಕರ್ ಹೇಳಿದರು.

‘ಮನೋಜ್ ದಾದಾ ಯುವಕರಲ್ಲಿ ಬಹಳ ಜನಪ್ರಿಯರು. ಜನರು ಅವರನ್ನು ತಮ್ಮ ರಕ್ಷಕ ಎಂದೇ ಪರಿಗಣಿಸುತ್ತಾರೆ. ಅವರು ಮರಾಠ ಸಮುದಾಯಕ್ಕೆ ಮೀಸಲಾತಿ ಸಿಗುವಂತೆ ನೋಡಿಕೊಳ್ಳುತ್ತಾರೆ. ಅವರು ತುಂಬಾ ಸರಳರು. ತಮ್ಮ ಅಭಿಪ್ರಾಯವನ್ನು ಅಷ್ಟೇ ಪ್ರಬಲವಾಗಿ ವ್ಯಕ್ತಪಡಿಸುತ್ತಾರೆ’ ಎಂದು ಮರಾಠವಾಡ ಪ್ರದೇಶದಲ್ಲಿ ವ್ಯಾಪಕವಾಗಿ ಸುತ್ತಾಡುವ ಪ್ರವಾಸಿ ಕ್ಯಾಬ್ ಚಾಲಕ ವಿಷ್ಣು ಪಾಟೀಲ್ ಹೇಳಿದರು.

‘ಸಮಸ್ಯೆ ಸಂಕೀರ್ಣವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಇದರ ಪರಿಣಾಮ ಕಂಡುಬಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಅದು ಇನ್ನಷ್ಟು ಸ್ಪಷ್ಟವಾಗಿ ಗೋಚರಿಸುತ್ತದೆ. ಜಾರಂಗೆ ಪಾಟೀಲರು ಚುನಾವಣೆಗೆ ಸ್ಪರ್ಧಿಸಿಲ್ಲ. ಆದರೆ ಅವರ ಜನರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇದು ಪ್ರತಿಪಕ್ಷದ ಮಹಾ ವಿಕಾಸ್ ಅಘಾಡಿಗಿಂತ ಆಡಳಿತಾರೂಢ ಮಹಾಯುತಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ’ ಎಂದು ಬೀಡ್‌ನಿಂದ ಬಂದು, ಛತ್ರಪತಿ ಸಂಭಾಜಿನಗರದಲ್ಲಿ ನೆಲೆಸಿರುವ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕ ನಿಸಾರ್ ಅಹ್ಮದ್ ಖಾನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.