ಮುಂಬೈ: ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೇರಿದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್ ನೇತೃತ್ವದ 'ಮಹಾ ವಿಕಾಸ ಆಘಾಡಿ' (ಎಂವಿಎ) ಮೈತ್ರಿಕೂಟವು ಬುಧವಾರ ಘೋಷಣೆ ಮಾಡಿದೆ.
ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಹಾಗೂ ಶದರ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಸಹ ಎಂವಿಎ ಕೂಟದಲ್ಲಿವೆ.
ರಾಜ್ಯಸಭಾ ಸದಸ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಉದ್ಧವ್ ಠಾಕ್ರೆ ಮತ್ತು ಶದರ್ ಪವಾರ್ ಅವರು ಮುಂಬೈನ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ನಡೆದ ಸಮಾವೇಶದಲ್ಲಿ 'ಪಂಚ' ಗ್ಯಾರಂಟಿಗಳನ್ನು ಘೋಷಿಸಿದ್ದಾರೆ.
ಜಾತಿಗಣತಿ ನಡೆಸಲಾಗುವುದು. ಮೀಸಲಾತಿಗೆ ಇರುವ ಶೇ 50ರ ಮಿತಿ ರದ್ದುಗೊಳಿಸಲಾಗುವುದು. ಮಹಿಳೆಯರಿಗೆ ಪ್ರತಿ ತಿಂಗಳು ₹ 3,000 ಹಾಗೂ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು. ರೈತರಿಗೆ ₹ 3 ಲಕ್ಷ ವರೆಗಿನ ಸಾಲ ಮನ್ನಾ ಮಾಡಲಾಗುವುದು ಎಂಬ ಭರವಸೆಗಳನ್ನು ಮತದಾರರಿಗೆ ನೀಡಲಾಗಿದೆ.
ಗ್ಯಾರಂಟಿ ಯೋಜನೆಗಳಷ್ಟೇ ಅಲ್ಲದೆ, ಉಚಿತ ಚಿಕಿತ್ಸೆ, ₹ 25 ಲಕ್ಷ ವರೆಗಿನ ಆರೋಗ್ಯ ವಿಮೆ ಹಾಗೂ ನಿರುದ್ಯೋಗಿ ಯುವಕರಿಗೆ ₹ 4,000 ನೆರವು ನೀಡುವುದಾಗಿಯೂ ವಿರೋಧ ಪಕ್ಷಗಳು ಪ್ರಕಟಿಸಿವೆ.
288 ಸದಸ್ಯ ಬಲದ 'ಮಹಾ' ವಿಧಾನಸಭೆಗೆ ನವೆಂಬರ್ 20ರಂದು ಮತದಾನ ನಡೆಯಲಿದೆ. 23ರಂದು ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.