ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ಹಿರಿಯ ನಾಯಕ ನವಾಬ್ ಮಲಿಕ್ ಅವರು ಮುಂಬೈನ ಮನ್‌ಖುರ್ದ್ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವುದು ಬಿಜೆಪಿಗೆ ತೀವ್ರ ಮುಜುಗರವನ್ನುಂಟು ಮಾಡಿದೆ.
ಮೂರು ಬಾರಿ ಶಾಸಕರಾಗಿದ್ದ ನವಾಬ್ ಮಲಿಕ್ ಅವರು ಈ ಬಾರಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಬು ಅಸಿಂ ಅಜ್ಮಿ ವಿರುದ್ಧ ಸ್ಪರ್ಧಿಸಲಿದ್ದಾರೆ.
ಮಲಿಕ್ ಅವರ ಪುತ್ರಿ ಸನಾ ಮಲಿಕ್ ಅವರಿಗೆ ಆಡಳಿತಾರೂಢ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟದ ಭಾಗವಾಗಿರುವ ಎನ್‌ಸಿಪಿಯು ಅನುಶಕ್ತಿ ನಗರದಿಂದ ಟಿಕೆಟ್ ಘೋಷಿಸಿದೆ. ಸನಾ ಅವರು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಅಭ್ಯರ್ಥಿಯಾಗಿರುವ ನಟಿ ಮತ್ತು ಸಾಮಾಜಿಕ ಕಾರ್ಯಕರ್ತೆ ಸ್ವರಾ ಭಾಸ್ಕರ್ ಅವರ ಪತಿ ಫಹಾದ್ ಅಹಮದ್ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, ಬೃಹತ್ ರೋಡ್ ಶೋ ಮೂಲಕ ನವಾಬ್ ಮಲಿಕ್ ಎರಡು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ಅಭ್ಯರ್ಥಿಯಾಗಿ ಒಂದು ನಾಮಪತ್ರ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ಮತ್ತೊಂದು ನಾಮಪತ್ರ ಸಲ್ಲಿಸಿದ್ದಾರೆ.
‘ನಾನು (ಉಪ ಮುಖ್ಯಮಂತ್ರಿ ಮತ್ತು ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್), ಪ್ರಫುಲ್ ಪಟೇಲ್ (ಎನ್‌ಸಿಪಿ ಕಾರ್ಯಾಧ್ಯಕ್ಷ) ಮತ್ತು ಸುನಿಲ್ ತಟ್ಕರೆ (ಎನ್‌ಸಿಪಿ ಮಹಾರಾಷ್ಟ್ರ ಘಟಕದ ಅಧ್ಯಕ್ಷ) ಅವರಿಗೆ ಕೃತಜ್ಞನಾಗಿದ್ದೇನೆ. ಅವರಿಗೆ ನನ್ನ ಮೇಲೆ ವಿಶ್ವಾಸವಿದೆ. ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ನನ್ನನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಮಲಿಕ್ ಹೇಳಿದ್ದಾರೆ.
ಪಾಕಿಸ್ತಾನ ಮೂಲದ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಪಿಎಂಎಲ್‌ಎ ಕಾಯ್ದೆಯಡಿ 2022ರ ಫೆಬ್ರುವರಿ 23ರಂದು ಮಲಿಕ್ ಅವರನ್ನು ಬಂಧಿಸಿತ್ತು. ಸದ್ಯ ಅವರು ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ.
ಈ ಹಿನ್ನೆಲೆಯಲ್ಲಿ ನವಾಬ್ ಮಲಿಕ್ ಅವರಿಗೆ ಟಿಕೆಟ್ ನೀಡಲು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.