ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟಕ್ಕೆ ಭಾರಿ ಬಹುಮತದ ವಿಜಯ ನಿಕ್ಕಿಯಾಗುತ್ತಿದ್ದಂತೆಯೇ, ‘ನನ್ನ ಮಗ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದು ಖಚಿತ’ ಎಂದು ಹಾಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ತಾಯಿ ಸರಿತಾ ಫಡಣವೀಸ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಗ್ಪುರದಲ್ಲಿ ಮಾತನಾಡಿದ ಅವರು, ‘ಇಂದು ಖುಷಿಯ ದಿನ. ಎಲ್ಲಾ ಕಡೆಯಲ್ಲೂ ಸಂಭ್ರಮಾಚರಣೆ ನಡೆಯುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
‘ಒಬ್ಬ ತಾಯಿಯಾಗಿ ನನಗೆ ಇಂದು ಪ್ರಮುಖ ದಿನ. ದೇವೇಂದ್ರ ನಾಗ್ಪುರದ ಮಗ. ಇವತ್ತು ಅವನು ದೊಡ್ಡ ನಾಯಕನಾಗಿದ್ದಾನೆ’ ಎಂದು ಅವರು ಸಂತೋಷಭರಿತರಾಗಿ ಮಾತನಾಡಿದ್ದಾರೆ. ಅಲ್ಲದೆ ಮಹಾಯುತಿ ಅಧಿಕಾರಕ್ಕೆ ಬರಲು ನನ್ನ ಮಗ 24*7 ಕೆಲಸ ಮಾಡಿದ್ದಾನೆ ಎಂದು ಹೇಳಿದ್ದಾರೆ.
‘ದೇವೆಂದ್ರ ಸರಿಯಾಗಿ ನಿದ್ದೆ, ಊಟ ಮಾಡಿಲ್ಲ. ಕೇವಲ ಪ್ರಚಾರ.. ಪ್ರಚಾರ.. ಪ್ರಚಾರ.. ಅಷ್ಟೇ’ ಎಂದು ಸರಿತಾ ಹೇಳಿದ್ದಾರೆ.
ನಿಮ್ಮ ಮಗ ಮುಖ್ಯಮಂತ್ರಿಯಾಗಬೇಕೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗೆ ಅನುಮಾನವೇ ಇಲ್ಲ. ನನ್ನ ಮಗ ಮುಖ್ಯಮಂತ್ರಿಯಾಗುತ್ತಾನೆ. ಅವನು ಪ್ರಯತ್ನ ಪಟ್ಟಿದ್ದಾನೆ’ ಎಂದು ಹೇಳಿದ್ದಾರೆ.
ನನ್ನ ಮಗನ ಈ ಪಯಣದಲ್ಲಿ ಕೋಟ್ಯಂತರ ಸಹೋದರಿಯರ ಆಶೀರ್ವಾದ ಇತ್ತು ಎಂದು ಅವರು ಹೇಳಿದ್ದಾರೆ.
ದೇವೇಂದ್ರ ಫಡಣವೀಸ್ ಅವರ ತಂದೆ ಗಂಗಾಧರ ರಾವ್ ಫಡಣವೀಸ್ ಅವರು ಎಂಎಲ್‌ಸಿಯಾಗಿದ್ದರು. ಆಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಜೊತೆ ಕೆಲಸ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.