ಧುಲೆ: ತಮ್ಮ ನಾಲ್ಕನೇ ಪೀಳಿಗೆ ಬಂದರೂ ಮುಸ್ಲಿಮರಿಗೆ ಮೀಸಲಾತಿ ಕೊಡಿಸಲು ಸಾಧ್ಯವಿಲ್ಲ ಎಂಬುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೆನಪಿನಲ್ಲಿಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಮುಸ್ಲಿಂ ಮುಖಂಡರ ಗುಂಪು, ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಮುಸ್ಲಿಮರಿಗೆ ಮೀಸಲಾತಿ ಒದಗಿಸುವಂತೆ ಮನವಿ ಮಾಡಿದ್ದಾರೆ. ಒಂದೊಮ್ಮೆ, ಮುಸ್ಲಿಮರಿಗೆ ಮೀಸಲಾತಿ ನೀಡಿದರೆ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿಯಲ್ಲಿ ಕಡಿತ ಮಾಡಬೇಕಾಗುತ್ತದೆ. ರಾಹುಲ್ ಬಾಬಾ, ನೀವಷ್ಟೇ ಅಲ್ಲ. ನಿಮ್ಮ ವಂಶದ ನಾಲ್ಕನೇ ತಲೆಮಾರು ಬಂದರೂ ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿ ಕಡಿತ ಮಾಡಿ, ಮುಸ್ಲಿಮರಿಗೆ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
‘370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ಸ್ಥಾನಮಾನವನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ. ಇಂದಿರಾ ಗಾಂಧಿ ಸ್ವರ್ಗದಿಂದ ಇಳಿದುಬಂದರೂ ಅದು ಸಾಧ್ಯವಿಲ್ಲ’ಎಂದು ಶಾ ಹೇಳಿದ್ದಾರೆ.
ನಾನು ಕೇಂದ್ರದ ಗೃಹ ಸಚಿವನಾಗಿದ್ದಾಗ ಶ್ರೀನಗರದ ಲಾಲ್ ಚೌಕ್‌ಗೆ ತೆರಳಲು ಹೆದರುತ್ತಿದ್ದೆ ಎಂಬ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಹೇಳಿಕೆಯನ್ನು ಉಲ್ಲೇಖಿಸಿದ ಶಾ, ಶಿಂದೆ ಜೀ ಈಗ ನಿಮ್ಮ ಮೊಮ್ಮಕ್ಕಳ ಜೊತೆ ಕಾಶ್ಮೀರಕ್ಕೆ ಹೋಗಿ. ನಿಮಗೆ ಯಾವುದೇ ತೊಂದರೆ ಆಗಲ್ಲ. ಸೋನಿಯಾ–ಮನಮೋಹನ್ ಸಿಂಗ್ ಅವರ 10 ವರ್ಷಗಳ ಆಡಳಿತಾವಧಿಯಲ್ಲಿ ಭಯೋತ್ಪಾದಕರು ಪಾಕಿಸ್ತಾನದಿಂದ ಆರಾಮಾಗಿ ಬಂದು ಬಾಂಬ್ ಸ್ಫೋಟಿಸಿ ಹೋಗುತ್ತಿದ್ದರು ಎಂದು ಶಾ ಆರೋಪಿಸಿದ್ದಾರೆ.
ಔರಂಗಜೇಬ್ ಫ್ಯಾನ್ಸ್ ಕ್ಲಬ್ ರೀತಿ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಒಗ್ಗೂಡಿದೆ. ಆದರೆ, ಮಹಾಯುತಿ ಮೈತ್ರಿಯು ಶಿವಾಜಿ ಮಹಾರಾಜ್ ಮತ್ತು ವೀರ ಸಾವರ್ಕರ್ ಆದರ್ಶಗಳನ್ನು ಮೈಗೂಡಿಸಿಕೊಂಡಿದೆ ಎಂದಿದ್ದಾರೆ.
‘ಎಂವಿಎ ಬಣಕ್ಕೆ ಓಲೈಕೆ ರಾಜಕಾರಣವೇ ಮುಖ್ಯವಾಗಿದೆ. ಉದ್ಧವ್ ಠಾಕ್ರೆಯವರು ಅಧಿಕಾರಕ್ಕಾಗಿ ಬಾಳಾಸಾಹೇಬ್ ಠಾಕ್ರೆ ತತ್ವಗಳನ್ನು ಮರೆತಿದ್ದಾರೆ’ಎಂದು ಶಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.