ADVERTISEMENT

'ಮಹಾ' ಚುನಾವಣೆಗಾಗಿ ಕರ್ನಾಟಕ ಕಾಂಗ್ರೆಸ್‌ನಿಂದ ₹ 700 ಕೋಟಿ ವಸೂಲಿ: ಮೋದಿ ಆರೋಪ

ಪಿಟಿಐ
Published 9 ನವೆಂಬರ್ 2024, 11:34 IST
Last Updated 9 ನವೆಂಬರ್ 2024, 11:34 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಹಾಗೂಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಪ್ರಧಾನಿ ನರೇಂದ್ರ ಮೋದಿ ಹಾಗೂಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ

   

ಮುಂಬೈ: ಮಹಾರಾಷ್ಟ್ರ ಚುನಾವಣೆ ವೆಚ್ಚಕ್ಕಾಗಿ ಕರ್ನಾಟಕ ಕಾಂಗ್ರೆಸ್ ಪಕ್ಷವು ಬರೋಬ್ಬರಿ ₹ 700 ಕೋಟಿ ವಸೂಲಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಆರೋಪಿಸಿದ್ದಾರೆ.

ಚುನಾವಣೆ ಸಲುವಾಗಿ ಬಿಜೆಪಿ ನೇತೃತ್ವದ 'ಎನ್‌ಡಿಎ' ಅಭ್ಯರ್ಥಿಗಳ ಪರ ಅಕೋಲದಲ್ಲಿ ಪ್ರಚಾರ ನಡೆಸಿದ ಮೋದಿ, 'ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೇರುವ ರಾಜ್ಯವು ಆ ಪಕ್ಷದ 'ರಾಯಲ್‌ ಫ್ಯಾಮಿಲಿ' ಪಾಲಿಗೆ ಎಟಿಎಂ ಆಗಿ ಬದಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳು ಆ ಕುಟುಂಬದ ಎಟಿಎಂಗಳಾಗಿವೆ' ಎಂದು ದೂರಿದ್ದಾರೆ.

ADVERTISEMENT

'ಮಹಾರಾಷ್ಟ್ರ ಚುನಾವಣೆ ಹೆಸರಿನಲ್ಲಿ ಕರ್ನಾಟಕದಲ್ಲಿ 'ವಸೂಲಿ' ದುಪ್ಪಟ್ಟಾಗಿದೆ ಎಂದು ಜನರು ಹೇಳುತ್ತಿದ್ದಾರೆ. ಚುನಾವಣೆ ನಡೆಯುತ್ತಿರುವುದು ಮಹಾರಾಷ್ಟ್ರದಲ್ಲಿ. ಆದರೆ, ವಸೂಲಿ ದ್ವಿಗುಣಗೊಂಡಿರುವುದು ಕರ್ನಾಟಕ ಮತ್ತು ತೆಲಂಗಾಣದಲ್ಲಿ (ಕಾಂಗ್ರೆಸ್‌ ಅಧಿಕಾರದಲ್ಲಿರುವ ನೆರೆ ರಾಜ್ಯಗಳು)' ಎಂದು ಹೇಳಿದ್ದಾರೆ.

ಮುಂದುವರಿದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ ವಿರುದ್ಧ ಚಾಟಿ ಬೀಸಿರುವ ಅವರು, 'ರಾಜ್ಯದಲ್ಲಿ ಮದ್ಯದಂಗಡಿಗಳ ಮಾಲೀಕರಿಂದ ಆ ಪಕ್ಷದವರು ₹ 700 ಕೋಟಿ ಸಂಗ್ರಹಿಸಿದ್ದಾರೆ ಎಂಬ ಆರೋಪವಿದೆ' ಎಂದು ಬಾಣ ಬಿಟ್ಟಿದ್ದಾರೆ.

288 ಸದಸ್ಯ ಬಲದ 'ಮಹಾ' ವಿಧಾನಸಭೆಗೆ ನವೆಂಬರ್‌ 20ರಂದು ಮತದಾನ ನಡೆಯಲಿದೆ. ನವೆಂಬರ್‌ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಬಿಜೆಪಿಯು ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಮತ್ತು ಅಜಿತ್‌ ಪವಾರ್ ಅವರ ಎನ್‌ಸಿಪಿಯೊಂದಿಗೆ ಆಡಳಿತಾರೂಢ 'ಮಹಾಯುತಿ' ಮೈತ್ರಿಕೂಟದಲ್ಲಿದೆ.

ಕಾಂಗ್ರೆಸ್‌, ಮಾಜಿ ಸಿಎಂ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ, ಶರದ್‌ ಪವಾರ್‌ ಅವರ ಎನ್‌ಸಿಪಿ ಇರುವ 'ಮಹಾ ವಿಕಾಸ ಆಘಾಡಿ' (ಎಂವಿಎ) ಕೂಟವು ಮಹಾಯುತಿಗೆ ಸವಾಲೊಡ್ಡಿದೆ.

ಎಂವಿಎ ವಿರುದ್ಧವೂ ವಾಗ್ದಾಳಿ ನಡೆಸಿರುವ ಪ್ರಧಾನಿ, 'ಇಡೀ ಮಹಾ ವಿಕಾಸ ಆಘಾಡಿಯು ಭ್ರಷ್ಟಾಚಾರ, ಬಹುಕೋಟಿ ಹಗರಣ ಮತ್ತು ಸುಲಿಗೆಯ ಮೇಲೆ ನಿಂತಿದೆ ಎಂಬುದು ಇಡೀ ರಾಷ್ಟ್ರಕ್ಕೆ ಗೊತ್ತಿದೆ. ಅದು, ವರ್ಗಾವಣೆ ದಂಧೆ, ಹಗರಣಗಳು ಮತ್ತು ಲೂಟಿಗೆ ಸಮಾನಾರ್ಥಕವಾಗಿದೆ' ಎಂದು ಗುಡುಗಿದ್ದಾರೆ.

ಅಂಬೇಡ್ಕರ್‌ ಅವರ ಪರಂಪರೆಗೆ ಸಂಬಂಧಪಟ್ಟ ಸ್ಥಳಗಳನ್ನು ನಮ್ಮ ಸರ್ಕಾರ ಅಭಿವೃದ್ಧಿಪಡಿಸಿದೆ. ಯುಪಿಐಗೆ ಭೀಮ್‌ ಯುಪಿಐ ಎಂದು ಹೆಸರಿಟ್ಟಿದೆ.
–ನರೇಂದ್ರ ಮೋದಿ, ಪ್ರಧಾನಿ
‘ಪಂಚತೀರ್ಥಕ್ಕೆ ಕಾಂಗ್ರೆಸ್‌ನವರು ಭೇಟಿ ನೀಡಿಲ್ಲ’
‘ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಜೀವನ–ಸಾಧನೆಯೊಂದಿಗೆ ಬೆಸೆದುಕೊಂಡ ಸ್ಥಳಗಳನ್ನು ಒಳಗೊಂಡ ‘ಪಂಚತೀರ್ಥ’ಕ್ಕೆ ಪಕ್ಷದ ನಾಯಕರು ಭೇಟಿ ನೀಡಿಲ್ಲ. ಭೇಟಿ ನೀಡಿದ್ದಲ್ಲಿ ಅದನ್ನು ಸಾಬೀತುಪಡಿಸಲಿ’ ಎಂದು ಪ್ರಧಾನಿ ಮೋದಿ ಇದೇ ವೇಳೆ ಕಾಂಗ್ರೆಸ್‌ಗೆ ಸವಾಲು ಹಾಕಿದರು. ‘ಅಂಬೇಡ್ಕರ್‌ ಅವರು ದಲಿತರಾಗಿದ್ದರು ಹಾಗೂ ಸಂವಿಧಾನ ರಚನೆಯ ಶ್ರೇಯಸ್ಸು ಅವರಿಗೆ ಸಂದಿತ್ತು ಎಂಬ ಕಾರಣಕ್ಕೆ ಕಾಂಗ್ರೆಸ್‌ ಅವರನ್ನು ದ್ವೇಷಿಸುತ್ತದೆ. ಆದರೆ ಬಾಬಾ ಸಾಹೇಬ್‌ ಅಂಬೇಡ್ಕರ್‌ ನನಗೆ ಬಿಜೆಪಿ ಪಕ್ಷಕ್ಕೆ ಹಾಗೂ ನನ್ನ ಸರ್ಕಾರಕ್ಕೆ ಪ್ರೇರಣೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.