ADVERTISEMENT

Maharashtra Elections 2024: ಎರಡು ಕ್ಷೇತ್ರಗಳಿಗೆ ‘ಮಹಾಯುತಿ’ಯಲ್ಲಿ ತಿಕ್ಕಾಟ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 15:30 IST
Last Updated 1 ನವೆಂಬರ್ 2024, 15:30 IST
ಏಕನಾಥ ಶಿಂದೆ
ಏಕನಾಥ ಶಿಂದೆ   

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಕಾಪು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಮುಂಬೈನ ಮಾಹಿಮ್‌ ಮತ್ತು ಮನ್‌ಖುರ್ದ್– ಶಿವಾಜಿನಗರ ಕ್ಷೇತ್ರಗಳಲ್ಲಿ ಮಹಾಯುತಿ ಮೈತ್ರಿ ಪಕ್ಷಗಳಲ್ಲಿ ತಿಕ್ಕಾಟ ಏರ್ಪಟ್ಟಿದ್ದು, ಅದನ್ನು ಪರಿಹರಿಸುವುದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ಈ ಎರಡೂ ಕ್ಷೇತ್ರಗಳಲ್ಲಿ ‘ಮಹಾಯುತಿ’ ಮಿತ್ರಪಕ್ಷಗಳ ನಡುವಿನ ಸಂಘರ್ಷ ಶಮನಗೊಳಿಸಲು ಬಿಜೆಪಿ ಸರ್ವ ಪ್ರಯತ್ನದಲ್ಲಿ ತೊಡಗಿದೆ.

ಈ ಸಂಬಂಧ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಮುಖ್ಯಮಂತ್ರಿ ಏಕನಾಥ ಶಿಂದೆ (ಶಿವಸೇನಾ ನಾಯಕ) ಮತ್ತು ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ (ಎನ್‌ಸಿಪಿ ನಾಯಕ) ಅವರ ಜತೆ ನಿರಂತರ ಸಂಪರ್ಕದಲ್ಲಿದ್ದು, ಮಾತುಕತೆಯಲ್ಲಿ ತೊಡಗಿದ್ದಾರೆ.

ADVERTISEMENT

ಇದೇ 20ರಂದು ನಡೆಯುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕೇವಲ ಮೂರು ದಿನಗಳು ಉಳಿದಿವೆ. ಈ ಸಂದರ್ಭದಲ್ಲಿ ಮೈತ್ರಿ ಪಕ್ಷಗಳ ಮನವೊಲಿಸುವ ಕಸರತ್ತನ್ನು ಬಿಜೆಪಿ ತೀವ್ರಗೊಳಿಸಿದೆ.

ಮಾಹಿಮ್‌ನಿಂದ ಎಂಎನ್‌ಎಸ್‌ ಅಧ್ಯಕ್ಷ ರಾಜ್‌ಠಾಕ್ರೆ ಅವರ ಪುತ್ರ ಅಮಿತ್‌ ಠಾಕ್ರೆ ಕಣಕ್ಕಿಳಿದಿದ್ದಾರೆ. ಅಲ್ಲಿ ಸ್ಪರ್ಧಿಸಿರುವ ಶಿವಸೇನಾದ (ಶಿಂದೆ ಬಣ) ಸರ್ವಾಂಕರ್‌ ಹಿಂದೆ ಸರಿಯಬೇಕು ಎಂದು ಬಿಜೆಪಿ ಬಯಸುತ್ತಿದೆ. ಎರಡು ಬಾರಿಯ ಶಾಸಕ ಸರ್ವಾಂಕರ್‌ ಅದನ್ನು ನಿರಾಕರಿಸಿದ್ದಾರೆ.

ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್‌ ಜತೆ ಆತ್ಮೀಯ ಸಂಬಂಧ ಹೊಂದಿರುವ ನವಾಬ್‌ ಮಲಿಕ್‌ ಅವರು ಮನ್‌ಖುರ್ದ್– ಶಿವಾಜಿನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮಲಿಕ್‌ ಅವರ ಪುತ್ರಿ ಸನಾ ಮಲಿಕ್‌ ಅವರಿಗೆ ಅನುಶಕ್ತಿ ನಗರದಿಂದ ಟಿಕೆಟ್‌ ನೀಡಿದರ ಹೊರತಾಗಿಯೂ ಮಲಿಕ್‌ ಅವರು ಸ್ಪರ್ಧಿಸಿರುವುದು ಬಿಜೆಪಿಗೆ ಇರುಸು ಮುರುಸು ಉಂಟು ಮಾಡಿದೆ. ಮನ್‌ಖುರ್ದ್– ಶಿವಾಜಿನಗರ ಕ್ಷೇತ್ರದಲ್ಲಿ ಮಹಾಯುತಿಯ ಅಧಿಕೃತ ಅಭ್ಯರ್ಥಿಯಾಗಿ ಶಿವಸೇನಾದ ಸುರೇಶ್‌ ಪಾಟೀಲ್‌ ನಾಮಪತ್ರ ಸಲ್ಲಿಸಿದ್ದಾರೆ.

ನವಾಬ್‌ ಮಲಿಕ್‌ ವಿರುದ್ಧ ಹಣ ಅಕ್ರಮ ವರ್ಗಾವಣೆ ಆರೋಪಗಳಿವೆ ಎಂಬ ಕಾರಣಕ್ಕೆ ಮತ್ತು ಅವರು ಮಹಾ ವಿಕಾಸ್‌ ಆಘಾಡಿ ಸರ್ಕಾರದ ಅವಧಿಯಲ್ಲಿ ಅವಿಭಜಿತ ಎನ್‌ಸಿಪಿಯ ವಕ್ತಾರರಾಗಿದ್ದಾಗ ಬಿಜೆಪಿ ನಾಯಕರ ವಿರುದ್ಧ ಆರೋಪಗಳನ್ನು ಮಾಡಿದ್ದರು ಎಂಬ ಕಾರಣಕ್ಕೆ ಬಿಜೆಪಿ ಅವರನ್ನು ವಿರೋಧಿಸುತ್ತಿದೆ.

ಮಲಿಕ್‌ ಪರ ಯಾವುದೇ ಪ್ರಚಾರ ಮಾಡುವುದಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಅದರ ಬೆನ್ನಲ್ಲೇ, ತಾನು ಕೇಸರಿ ಪಕ್ಷದ ಬೆಂಬಲ ಬಯಸುವುದಿಲ್ಲ ಎಂದು ಮಲಿಕ್‌ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.