ಠಾಣೆ: ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ 'ಮಹಾಯುತಿ' ಮೈತ್ರಿ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಏಕನಾಥ ಶಿಂದೆ, ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬುದು ಸದ್ಯ ಮುಖ್ಯವಲ್ಲ ಎಂದು ಹೇಳಿದ್ದಾರೆ.
ಶಿಂದೆ ನೇತೃತ್ವದ ಶಿವಸೇನಾ, ಬಿಜೆಪಿ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ 'ಮಹಾಯುತಿ' ಮೈತ್ರಿಕೂಟದಲ್ಲಿದೆ.
288 ಸದಸ್ಯ ಬಲದ 'ಮಹಾ' ವಿಧಾನಸಭೆಗೆ ನವೆಂಬರ್ 20ರಂದು ಮತದಾನ ನಡೆಯಲಿದೆ. ಮೂರು ದಿನಗಳ ಬಳಿಕ (ನವೆಂಬರ್ 23ರಂದು) ಫಲಿತಾಂಶ ಪ್ರಕಟವಾಗಲಿದೆ.
ಚುನಾವಣೆ ಕುರಿತು ಹೇಳಿಕೆ ನೀಡಿರುವ ಶಿಂದೆ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ, ಶರದ್ ಪವಾರ್ ಅವರ ಎನ್‌ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನೊಳಗೊಂದ 'ಮಹಾ ವಿಕಾಸ ಆಘಾಡಿ' (ಎಂವಿಎ) ಮೈತ್ರಿಕೂಟವನ್ನು ಅಧಿಕಾರದಿಂದ ದೂರವಿಡುವುದು ನಮ್ಮ ಗುರಿ ಎಂದು ಪ್ರತಿಪಾದಿಸಿದ್ದಾರೆ.
'ಮಹಾ ವಿಕಾಸ ಆಘಾಡಿಯನ್ನು ಅಧಿಕಾರದಿಂದ ದೂರ ಇಡಲು ಶ್ರಮಿಸುತ್ತಿದ್ದೇವೆ. ಅವರು ಅಧಿಕಾರಕ್ಕೇರಿದರೆ ರಾಜ್ಯವನ್ನು 25 ವರ್ಷಗಳಷ್ಟು ಹಿಂದಕ್ಕೆ ಕರೆದೊಯ್ಯಲಿದ್ದಾರೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಎರಡೂವರೆ ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ಶಿಂದೆ, ತಮ್ಮ ಸರ್ಕಾರವು ರಾಜ್ಯದ ಅಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಒತ್ತು ನೀಡಿದೆ ಎಂದಿದ್ದಾರೆ.
'ಚುನಾವಣೆ ಬಳಿಕ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ನನಗೆ ಮುಖ್ಯವೇ ಅಲ್ಲ. ಮೈತ್ರಿಯಲ್ಲಿರುವ ಮೂರೂ ಪಕ್ಷಗಳು ಕಠಿಣವಾಗಿ ಶ್ರಮಿಸುತ್ತಿವೆ. ನಾವು ವಿಭಿನ್ನ ಪಕ್ಷಗಳಾಗಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯನ್ನು ಮುನ್ನಡೆಸುವ ನಿಟ್ಟಿನಲ್ಲಿ ಒಂದಾಗಿದ್ದೇವೆ' ಎಂದು ಹೇಳಿದ್ದಾರೆ.
ಉದ್ಧವ್ ಠಾಕ್ರೆ ನಾಯಕತ್ವದ ವಿರುದ್ಧ 2022ರಲ್ಲಿ ಬಂಡಾಯ ಸಾರಿದ್ದ ಶಿಂದೆ ಬಳಿಕ, ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ್ದರು. ಆಗ ಮುಖ್ಯಮಂತ್ರಿಯಾಗುವ ನಿರೀಕ್ಷೆ ಇರಲಿಲ್ಲ ಎಂದು ಹೇಳಿಕೊಂಡಿರುವ ಶಿಂದೆ, 'ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನನಗೆ ಅವಕಾಶ ನೀಡಿದರು. ನಿರಂತರವಾಗಿ ಮಾರ್ಗದರ್ಶನ ಮಾಡಿದರು' ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.