ಪರ್ಭಣಿ (ಮಹಾರಾಷ್ಟ್ರ): ‘ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಈಗಾಗಲೇ 20 ಬಾರಿ ಪತನಗೊಂಡಿರುವ ‘ರಾಹುಲ್ ಬಾಬಾ’ ಹೆಸರಿನ ವಿಮಾನವು ಮತ್ತೊಮ್ಮೆ ಪತನವಾಗುವುದು ಬಹುತೇಕ ಖಚಿತ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೇವಡಿ ಮಾಡಿದ್ದಾರೆ.
ಪರ್ಭಣಿ ಜಿಲ್ಲೆಯ ಜಿಂಟೂರಿನಲ್ಲಿ ನಡೆದ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ರಾಹುಲ್ ಬಾಬಾ’ ಹೆಸರಿನ ವಿಮಾನವನ್ನು ಸೋನಿಯಾ ಜಿ ಅವರು 20 ಬಾರಿ ಇಳಿಸಲು ಪ್ರಯತ್ನಿಸಿದ್ದರು. ಆದರೆ, ಆ ವಿಮಾನವು 20 ಬಾರಿಯೂ ಅಪಘಾತಕ್ಕೀಡಾಗಿದೆ. ಇದೀಗ ಮತ್ತೆ ಮಹಾರಾಷ್ಟ್ರದಲ್ಲಿ 21ನೇ ಬಾರಿಗೆ ವಿಮಾನವನ್ನು ಇಳಿಸುವ ಪ್ರಯತ್ನ ನಡೆಯುತ್ತಿದೆ. ಸೋನಿಯಾ ಅವರೇ, ನಿಮ್ಮ ‘ರಾಹುಲ್ ವಿಮಾನ’ 21ನೇ ಬಾರಿಯೂ ಪತನವಾಗುವುದು ಖಚಿತ’ ಎಂದು ಶಾ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಉದ್ದೇಶಪೂರ್ವಕವಾಗಿಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವನ್ನು ಹಲವು ವರ್ಷಗಳ ಕಾಲ ವಿಳಂಬವಾಗುವಂತೆ ಮಾಡಿತ್ತು ಎಂದು ಶಾ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರವನ್ನು ನಿರ್ಮಿಸಿದ್ದಾರೆ. ಔರಂಗಜೇಬನಿಂದ ಕೆಡವಲ್ಪಟ್ಟ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಸಹ ನಿರ್ಮಿಸಿದ್ದಾರೆ. ಗುಜರಾತ್‌ನ ಸೋಮನಾಥ ದೇವಸ್ಥಾನ ಮತ್ತಷ್ಟು ಅಭಿವೃದ್ಧಿಪಡಿಸಲಾಗಿದೆ. ಇದರಿಂದಾಗಿ ದೇಶದ ವಿವಿಧ ಭಾಗಗಳಿಂದ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ ಎಂದು ಶಾ ಹೇಳಿದ್ದಾರೆ.
‘ನಾನು ವಿದರ್ಭ, ಉತ್ತರ ಮಹಾರಾಷ್ಟ್ರ, ಪಶ್ಚಿಮ ಮಹಾರಾಷ್ಟ್ರ, ಕೊಂಕಣ, ಮುಂಬೈ, ಮರಾಠವಾಡ ಮುಂತಾದ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ನೀವು ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶವನ್ನು ತಿಳಿಯಲು ಬಯಸುವಿರಾ? ನಾನು ಹೇಳುತ್ತೇನೆ ಕೇಳಿ... ನವೆಂಬರ್ 23ರಂದು ‘ಮಹಾ ವಿಕಾಸ್ ಅಘಾಡಿ’ ಮೈತ್ರಿಕೂಟವನ್ನು ಮಹಾರಾಷ್ಟ್ರದಿಂದ ನಿರ್ನಾಮ ಮಾಡುವುದು ಖಚಿತ’ ಎಂದು ಶಾ ಗುಡುಗಿದ್ದಾರೆ.
ನವೆಂಬರ್ 23ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ‘ಮಹಾಯುತಿ’ ಮೈತ್ರಿಕೂಟ ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ರಾಹುಲ್ ಬಾಬಾ ಅವರ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷದವರು ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರಳಿ ತರಲು ನಿರ್ಣಯವನ್ನು ಅಂಗೀಕರಿಸಿದ್ದಾರೆ. ರಾಹುಲ್ ಬಾಬಾ ಅವರೇ, ಎಚ್ಚರಿಕೆಯಿಂದ ಆಲಿಸಿ... ನೀವು ಮಾತ್ರವಲ್ಲ, ನಿಮ್ಮ ನಾಲ್ಕು ತಲೆಮಾರುಗಳು ಬಂದರೂ ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ’ ಎಂದು ಶಾ ಕುಟುಕಿದ್ದಾರೆ.
ಔರಂಗಾಬಾದ್ ಅನ್ನು ಛತ್ರಪತಿ ಸಂಭಾಜಿನಗರ ಎಂದು ಮರುನಾಮಕರಣ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದವರೊಂದಿಗೆ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮೈತ್ರಿ ಹೊಂದಿದ್ದಾರೆ ಎಂದೂ ಶಾ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.