ADVERTISEMENT

ಮಹಾ ಚುನಾವಣೆ | ಬಿಜೆಪಿ ಏಕಾಂಗಿಯಾಗಿ ಗೆಲ್ಲಲಾರದು, ದೊಡ್ಡ ಪಕ್ಷವಾಗಲಿದೆ: ಫಡಣವೀಸ್

ಪಿಟಿಐ
Published 28 ಅಕ್ಟೋಬರ್ 2024, 2:02 IST
Last Updated 28 ಅಕ್ಟೋಬರ್ 2024, 2:02 IST
ದೇವೇಂದ್ರ ಫಡಣವೀಸ್
ದೇವೇಂದ್ರ ಫಡಣವೀಸ್   

ಮುಂಬೈ: ರಾಜ್ಯ ವಿಧಾನಸಭೆ ಚುನಾವಣೆಯನ್ನು ಬಿಜೆಪಿಯು ಏಕಾಂಗಿಯಾಗಿ ಗೆಲ್ಲಲಾರದು. ಆದರೆ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಅವರು, ವಾಸ್ತವವನ್ನು ಅರಿಯಬೇಕು ಎಂದಿದ್ದಾರೆ. ಬಿಜೆಪಿ, ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಹಾಗೂ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿದ್ದು, ಮಹಾಯುತಿ ಮೈತ್ರಿಕೂಟ ಜಯ ಸಾಧಿಸಲಿವೆ ಎಂದು ಒತ್ತಿ ಹೇಳಿದ್ದಾರೆ.

'ಬಿಜೆಪಿಯು ರಾಜ್ಯದಲ್ಲಿ ಏಕಾಂಗಿಯಾಗಿ ಗೆಲುವು ಸಾಧಿಸಲಾರದು. ಆದರೆ, ನಾವು ಅತಿ ಹೆಚ್ಚು ಸ್ಥಾನಗಳನ್ನು ಹಾಗೂ ಹೆಚ್ಚಿನ ಪ್ರಮಾಣದ ಮತಗಳನ್ನು ಗಳಿಸುವುದು ಖಚಿತ. ಚುನಾವಣೆ ನಂತರ, ಬಿಜೆಪಿಯು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಮೂರೂ ಪಕ್ಷಗಳ ಮತಗಳ ಕ್ರೋಢೀಕರಣವು ನಮ್ಮನ್ನು ಜಯಶೀಲರನ್ನಾಗಿಸಲಿವೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ.

ADVERTISEMENT

ಬಿಜೆಪಿಯಲ್ಲಿ ಟಿಕೆಟ್ ಗಿಟ್ಟಿಸಲು ವಿಫಲವಾಗಿರುವ ನಾಯಕರು ಅಸಮಾಧಾನಗೊಂಡಿರುವ ಬಗ್ಗೆ ಹಾಗೂ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಸಾಧ್ಯತೆಯ ಬಗ್ಗೆಯೂ ಹೇಳಿಕೆ ನೀಡಿದ್ದು, ಟಿಕೆಟ್‌ ನಿರೀಕ್ಷೆಯಲ್ಲಿದ್ದವರಿಗೆ ಅವಕಾಶ ಸಿಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಮತದಾನ ನಡೆಯಲಿದ್ದು, 23ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ 121 ಅಭ್ಯರ್ಥಿಗಳನ್ನು ಘೋಷಿಸಿದೆ.

2019ರ ಚುನಾವಣೆಯಲ್ಲಿ ಬಿಜೆಪಿಯು 10 ಸ್ಥಾನಗಳನ್ನು ಗೆದ್ದಿತ್ತು. ಶಿವಸೇನಾ (ಅವಿಭಜಿತ) 56 ಹಾಗೂ ಎನ್‌ಸಿಪಿ (ಅವಿಭಜಿತ) 54 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಕಾಂಗ್ರೆಸ್‌ 44 ಕಡೆ ಜಯ ಗಳಿಸಿತ್ತು.

ಕಾಂಗ್ರೆಸ್‌, ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ ಹಾಗೂ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ 'ಮಹಾ ವಿಕಾಸ ಆಘಾಡಿ' ಮೈತ್ರಿಕೂಟದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.