ಮುಂಬೈ: 'ಗ್ಯಾರಂಟಿ ಕಾರ್ಡ್'ನೊಂದಿಗೆ ವಿಧಾನಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್ ಸಜ್ಜಾಗಿದೆ. ಈ ತಂತ್ರವು ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ವೈಫಲ್ಯ ಕಂಡಿದೆ. ನಮ್ಮಲ್ಲೂ ಯಶಸ್ವಿಯಾಗುವುದಿಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಫಡಣವೀಸ್, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಪಕ್ಷದ ಚುನಾವಣಾ ಭರವಸೆಗಳನ್ನೊಳಗೊಂಡ ಗ್ಯಾರಂಟಿ ಕಾರ್ಡ್ ಅನ್ನು ಬಿಡುಗಡೆ ಮಾಡಲಿದ್ದಾರೆ ಎಂದಿದ್ದಾರೆ.
'ರಾಹುಲ್ ಗಾಂಧಿ ಅವರ ಗ್ಯಾರಂಟಿ ಕಾರ್ಡ್, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಕಾಂಗ್ರೆಸ್‌ಗೆ ನೆರವಾಗಿರಲಿಲ್ಲ. ತಾವು ಭರವಸೆ ನೀಡಿದ್ದ ಹಾಗೆ, ಗ್ಯಾರಂಟಿ ಕಾರ್ಡ್‌ಗಳು ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಜಾರಿಯಾಗಲಿಲ್ಲವೇಕೆ ಎಂಬುದನ್ನೂ ಅವರು (ರಾಹುಲ್ ಗಾಂಧಿ) ವಿವರಿಸಬೇಕು. ಈ ತಂತ್ರವು ಇಲ್ಲೂ ವಿಫಲವಾಗಲಿದೆ' ಎಂದು ಹೇಳಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಮತದಾನ ನಡೆಯಲಿದೆ. 23ರಂದು ಫಲಿತಾಂಶ ಪ್ರಕಟವಾಗಲಿದೆ.
'ಬಂಡಾಯ ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್'
ಬಿಜೆಪಿ ಹಾಗೂ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ, ಆಡಳಿತಾರೂಢ 'ಮಹಾಯುತಿ' ಮೈತ್ರಿಕೂಟದಲ್ಲಿವೆ.
ಟಿಕೆಟ್ ಸಿಗದ ಕಾರಣ ಆಕ್ರೋಶಗೊಂಡಿರುವ ಕೆಲವರು ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸುವ ಸಂಬಂಧ, ಮೈತ್ರಿಕೂಟದ ನಾಯಕರು ಸಿಎಂ ಶಿಂದೆ ಅವರ ನಿವಾಸದಲ್ಲಿ ಸಭೆ ನಡೆಸಿರುವುದಾಗಿ ಫಡಣವೀಸ್ ತಿಳಿಸಿದ್ದಾರೆ.
'ಹಲವು ಬಂಡಾಯ ಅಭ್ಯರ್ಥಿಗಳು ನವೆಂಬರ್ 4ರ ಒಳಗೆ ನಾಮಪತ್ರ ಹಿಂಪಡೆಯಲಿದ್ದಾರೆ' ಎಂದಿರುವ ಅವರು, ಬಂಡಾಯ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಖಚಿತಪಡಿಸಿದ್ದಾರೆ.
ನಾಮಪತ್ರಗಳನ್ನು ಹಿಂಪಡೆಯಲು ನವೆಂಬರ್ 4 ಕೊನೇ ದಿನವಾಗಿದೆ.
'ಮಹಾಯುತಿ ಮೈತ್ರಿಕೂಟದಿಂದ ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ಮುಗಿದಿದೆ. ನಾವು ನವೆಂಬರ್ 5ರಿಂದ ಪೂರ್ಣ ಉತ್ಸಾಹದೊಂದಿಗೆ ಪ್ರಚಾರ ಆರಂಭಿಸುತ್ತೇವೆ' ಎಂದಿದ್ದಾರೆ.
ಮೈತ್ರಿ ಅಭ್ಯರ್ಥಿ ವಿರುದ್ಧ ಬಿಜೆಪಿ ಪ್ರಚಾರ
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ನವಾಬ್ ಮಲಿಕ್ ಅವರು, ಮಹಾಯುತಿ ಮೈತ್ರಿ ಅಭ್ಯರ್ಥಿಯಾಗಿ ಮಂಖುರ್ದ್–ಶಿವಾಜಿ ನಗರ ಕ್ಷೇತ್ರದಿಂದ ಕಣದಲ್ಲಿದ್ದಾರೆ.
ಅಜಿತ್ ಪವಾರ್ ಅವರ ಎನ್‌ಸಿಪಿ ಪಕ್ಷದ ಪ್ರಮುಖ ನಾಯಕನಾಗಿರುವ ನವಾಬ್, ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಅವರ ಪರ ಬಿಜೆಪಿ ಪ್ರಚಾರ ಮಾಡುವುದಿಲ್ಲ ಎಂದು ಫಡಣವೀಸ್ ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ 'ಮಹಾಯುತಿ' ಅಧಿಕಾರಕ್ಕೇರಿದರೆ ನವಾಬ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆಯೇ ಎಂದು ಮಾಧ್ಯಮದವರು ಕೇಳಿದ್ದಕ್ಕೆ, 'ನಮ್ಮ ಪಕ್ಷವು ನವಾಬ್ ಪರ ಪ್ರಚಾರ ಮಾಡುವುದಿಲ್ಲ. ಹಾಗಾಗಿ, ಸಚಿವ ಸ್ಥಾನ ನೀಡುವ ಪ್ರಶ್ನೆಯೇ ಇಲ್ಲ. ನವಾಬ್ ವಿರುದ್ಧ ಕಣದಲ್ಲಿರುವ ಶಿವಸೇನಾ ಅಭ್ಯರ್ಥಿ ಪರ ನಮ್ಮ ಪಕ್ಷ ಪ್ರಚಾರ ನಡೆಸಲಿದೆ' ಎಂದು ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.